ಹುಬ್ಬಳ್ಳಿ: ಮಂಗಳೂರಿನಿಂದ ನಡೆದುಕೊಂಡು ಶನಿವಾರ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಮಧ್ಯಪ್ರದೇಶ ಮೂಲದ 50ಕ್ಕೂ ಹೆಚ್ಚು ಕೂಲಿ ಕಾರ್ಮಿಕರಲ್ಲಿ ಬಹುತೇಕರು ಇದಕ್ಕಿದ್ದ ಹಾಗೇ ಅಧಿಕಾರಿಗಳ ಕಣ್ತೆಪ್ಪಿಸಿ ಪರಾರಿಯಾಗಿದ್ದು, ಅಧಿಕಾರಿಗಳಿಗೆ ಅವರನ್ನು ಪತ್ತೆ ಮಾಡುವುದೇ ತಲೆ ನೋವಾಗಿ ಪರಿಣಮಿಸಿದೆ.
ಶನಿವಾರ ಮಂಗಳೂರಿನಿಂದ ನಡೆದುಕೊಂಡೆ ಬಂದಿದ್ದ ಸುಮಾರು 50 ಕ್ಕೂ ಹೆಚ್ಚು ಮಧ್ಯಪ್ರದೇಶ ಮೂಲದ ಕಾರ್ಮಿಕರು ತಮ್ಮನ್ನು ತಮ್ಮ ರಾಜ್ಯಕ್ಕೆ ಕಳುಹಿಸಿಕೊಡಿ, ಈಗಾಗಲೇ ಕೈಯಲ್ಲಿದ್ದ ಹಣವೆಲ್ಲ ಖಾಲಿಯಾಗಿದ್ದು, ಗ್ರಾಮಗಳಿಗೆ ತೆರಳಲು ಹಣವಿಲ್ಲ. ನಡೆದು ನಡೆದು ಸುಸ್ತಾಗಿದೆ. ಹೇಗಾದರೂ ಮಾಡಿ ನಮ್ಮ ಗ್ರಾಮಗಳಿಗೆ ನಮ್ಮನ್ನು ಕಳುಹಿಸಿಕೊಡಿ ಎಂದು ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದರು.
ಈ ವೇಳೆ ಅಧಿಕಾರಿಗಳು ಅವರಿಗೆ ಕಳುಹಿಸಿ ಕೊಡಲು ಇರುವ ವ್ಯವಸ್ಥೆ ಬಗ್ಗೆ ತಿಳಿಸಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಆದರೆ ಭಾನುವಾರ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದಲ್ಲಿ ನೀಡಿದ್ದ ಕೊಠಡಿಯಿಂದ ಅಧಿಕಾರಿಗಳ ಕಣ್ತೆಪ್ಪಿಸಿ ಪರಾರಿಯಾಗಿದ್ದಾರೆ. ಇದರಲ್ಲಿ ಅಧಿಕಾರಿಗಳ ನಿಷ್ಕಾಳಜಿ ಕೂಡ ಎದ್ದು ಕಾಣುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳೊಬ್ಬರ ಮಾಹಿತಿ ಪ್ರಕಾರ 39 ವಲಸೆ ಕಾರ್ಮಿಕರಿಗೆ ಇ-ಪಾಸ್ ನೀಡಲು ಸೇವಾ ಸಿಂಧು ಆ್ಯಪ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಊಟ ಸೇರಿದಂತೆ ವಿವಿಧ ವ್ಯವಸ್ಥೆ ಮಾಡಿ ತಿಳಿ ಹೇಳಲಾಗಿತ್ತು. ಅಷ್ಟರಲ್ಲಾಗಲೇ ವಲಸೆ ಕಾರ್ಮಿಕರು ಅಲ್ಲಿಂದ ಪರಾರಿಯಾಗಿದ್ದಾರೆ. ಕೂಲಿ ಕಾರ್ಮಿಕರು ಹೋಗಿದೆಲ್ಲಿಗೆ ಎಂಬ ಚಿಂತೆ ಅಧಿಕಾರಿಗಳಿಗೆ ಕಾಡತೊಡಗಿದೆ. ಅವರು ಚೆಕ್ ಪೋಸ್ಟ್ ದಾಟಿ ಮುಂದೆ ಹೋಗಲು ಆಗುವುದಿಲ್ಲ. ಅಲ್ಲಿ ಸಿಕ್ಕರೂ ಅವರನ್ನು ಮತ್ತೆ ಇಲ್ಲಿಗೆ ತರಲಾಗುತ್ತದೆ. ಇದರಿಂದ ಅವರು ನಗರ ಬಿಟ್ಟು ಹೊರಗಡೆ ಹೋಗಿಲ್ಲ. ಅವರ ಮೊಬೈಲ್ ನಂಬರ್ ಆಧಾರದಲ್ಲಿ ಪತ್ತೆ ಹಚ್ಚುವ ಕಾರ್ಯ ನಡೆದಿದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.