Wednesday, July 6, 2022

Latest Posts

ಹೂಳೆತ್ತುವ ಕಾಮಗಾರಿ ಅಪ್ರಯೋಜಕ: ಕಾಂಗ್ರೆಸ್ಸಿಗರಿಂದ ರಾಜಕೀಯ ಪ್ರೇರಿತ ಆರೋಪ

ಮಡಿಕೇರಿ: ಕಾವೇರಿ ನದಿಯ ಹೂಳೆತ್ತುವ ಕಾಮಗಾರಿಯಿಂದ ಕುಶಾಲನಗರದ ವಿವಿಧ ಬಡಾವಣೆಗಳಿಗೆ ಸಾಕಷ್ಟು ಪ್ರಯೋಜನವಾಗಿದ್ದರೂ ಜನಪರ ಕಾಮಗಾರಿಯ ವಿರುದ್ಧ ಕೆಲವು ಕಾಂಗ್ರೆಸ್ ಪ್ರಮುಖರು ಮಾಡಿರುವ ಆರೋಪಗಳು ರಾಜಕೀಯ ಪ್ರೇರಿತವೆಂದು ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ಅಭಿಪ್ರಾಯಪಟ್ಟಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಶಾಸಕ ಅಪ್ಪಚ್ಚುರಂಜನ್ ಅವರ ಕಾಳಜಿಯಿಂದಾಗಿ ಅನುಮೋದನೆಗೊಂಡ ರೂ.88 ಲಕ್ಷದಲ್ಲಿ ಇಲ್ಲಿಯವರೆಗೆ ಶೇ.60 ರಷ್ಟು ಮಾತ್ರ ಕಾಮಗಾರಿಯಾಗಿದೆ. ಪೂರ್ಣಗೊಂಡ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ ಎಂದರು.
ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್‍ನ ಪ್ರಮುಖರಾದ ವಿ.ಪಿ.ಶಶಿಧರ್ ಹಾಗೂ ಕೆ.ಪಿ. ಚಂದ್ರಕಲಾ ಅವರುಗಳು ಗೊಂದಲದ ಹೇಳಿಕೆಗಳನ್ನು ನೀಡಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದ ಅವರು, ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸುವ ಬಗ್ಗೆ ಟೀಕಾಕಾರರು ಇಲ್ಲಿಯವರೆಗೆ ಒಂದೇ ಒಂದು ಸಲಹೆಯನ್ನೂ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷಗಳಿಂದ ಹಲವು ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗಿ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕುಶಾಲನಗರದ ಪ್ರವಾಹ ಪೀಡಿತ ಬಡಾವಣೆಗಳ ಪ್ರತಿನಿಧಿಗಳ ಸಭೆ ನಡೆಸಿ, ನಂತರ ಸ್ಥಳೀಯ ಕ್ಷೇತ್ರದ ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಅಲ್ಲದೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿತ್ತು.
ಎಲ್ಲಾ ಹಂತಗಳಲ್ಲೂ ಜನರ ಬೇಡಿಕೆಗೆ ಸಹಕಾರ ನೀಡಿದ ಶಾಸಕ ಅಪ್ಪಚ್ಚು ರಂಜನ್ ಅವರು 88 ಲಕ್ಷ ರೂ.ಗಳ ಯೋಜನೆಗೆ ಅನುಮೋದನೆಯನ್ನು ದೊರಕಿಸಿಕೊಟ್ಟರು. ಈ ಬೆಳವಣಿಗೆಯಿಂದ ವಿಚಲಿತರಾದ ವಿ.ಪಿ.ಶಶಿಧರ್ ಹಾಗೂ ಚಂದ್ರಕಲಾ ಅವರು ಮುಂದೆ ರಾಜಕೀಯ ನೆಲೆ ತಪ್ಪಬಹುದೆನ್ನುವ ಆತಂಕದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಚಂದ್ರಮೋಹನ್ ಟೀಕಿಸಿದರು.
ಕಾವೇರಿ ನದಿಯ ಹೂಳೆತ್ತುವ ಕಾಮಗಾರಿಯ ಪ್ರತಿ ಹಂತದಲ್ಲೂ ಶಾಸಕರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದಲ್ಲದೇ ಹಲವು ಸಲಹೆಗಳನ್ನು ಕೂಡ ನೀಡಿದ್ದಾರೆ. ಆದರೆ ಬೆರಳೆಣಿಕೆಯಷ್ಟು ಮಂದಿ ಕಾಮಗಾರಿ ಪ್ರಾರಂಭದಿಂದಲೂ ಅಡ್ಡಿಪಡಿಸುತ್ತಿದ್ದು, ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜನಾಭಿಪ್ರಾಯದ ಪ್ರಕಾರ ಹೂಳೆತ್ತುವ ಕಾಮಗಾರಿಯಿಂದ ಪ್ರಯೋಜನವಾಗಿದ್ದು, ಪ್ರಶಂಸೆ ಕೂಡ ವ್ಯಕ್ತವಾಗಿದೆ. ಕುಶಾಲನಗರ ಪ್ರವಾಹ ಸಂತ್ರಸ್ತರ ವೇದಿಕೆ ರಾಜಕೀಯ ರಹಿತವಾದ ಸಂಘಟನೆಯಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ತಜ್ಞರ ಸಮಿತಿ ರಚಿಸಲು ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ ಎಂದರು.
ವೇದಿಕೆಯ ಕಾರ್ಯಾಧ್ಯಕ್ಷ ಎಂ.ಎಂ.ಚರಣ್ ಮಾತನಾಡಿ, ಸಾಮಾಜಿಕ ಕಳಕಳಿ ಹೊಂದಿರುವ ಕೆಲಸ, ಕಾರ್ಯಗಳನ್ನು ದೂಷಿಸುವುದು ಸರಿಯಾದ ಕ್ರಮವಲ್ಲ, ಸರ್ಕಾರದ ಅನುಮೋದನೆಯಂತೆ ಕಾಮಗಾರಿ ನಡೆದಿದ್ದು, ಯಾವುದೇ ಹಣ ದುರುಪಯೋಗವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಕೆ.ವರದ, ಉಪಾಧ್ಯಕ್ಷ ತೋರೆರ ಉದಯ ಕುಮಾರ್ ಹಾಗೂ ಖಜಾಂಚಿ ಕೊಡಗನ ಹರ್ಷ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss