ಹೊಸದಿಗಂತ ಆನ್ ಲೈನ್ ಡೆಸ್ಕ್:
ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಡಿ.ರೂಪಾ ಅವರನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಇಬ್ಬರು ಐಪಿಎಸ್ ಅಧಿಕಾರಿಗಳ ಜೊತೆ ಒಟ್ಟು 9 ಐಪಿಎಸ್ ಅಧಿಕಾರಿಗಳನ್ನ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ನಿರ್ಭಯಾ ನಿಧಿಯಡಿ ರೂಪಿಸಲಾದ ‘ಸುರಕ್ಷಿತ ನಗರ’ ಯೋಜನೆಯ ಗುತ್ತಿಗೆ ವಿಚಾರವಾಗಿ ಐಪಿಎಸ್ ಅಧಿಕಾರಿಗಳಾದ ಡಿ. ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ನಡುವೆ ಜಟಾಪಟಿಯೇ ನಡೆದಿದ್ದು, ಇದೀಗ ಅವರಿಬ್ಬರನ್ನೂ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಗೃಹ ಇಲಾಖೆ ಕಾರ್ಯದರ್ಶಿಯಾಗಿದ್ದ ಡಿ. ರೂಪಾ ಅವರನ್ನು ಕರಕುಶಲ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ. ಕಾರ್ಯದರ್ಶಿ ಹುದ್ದೆಗೆ ಮಾಲಿನಿ ಕೃಷ್ಣಮೂರ್ತಿ ಅವರನ್ನು ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು ನಗರ ಹೆಚ್ಚುವರಿ ಕಮಿಷನರ್ (ಆಡಳಿತ) ಆಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಮಾನವ ಹಕ್ಕುಗಳು ಮತ್ತು ಕುಂದುಕೊರತೆಗಳ ವಿಭಾಗದ ಡಿಜಿಪಿಯನ್ನಾಗಿ ಡಾ.ಕೆ.ರಾಮಚಂದ್ರ ರಾವ್, ಗೃಹ ಇಲಾಖೆ ಕಾರ್ಯದರ್ಶಿ(ಪಿಸಿಎಎಸ್) ಮಾಲಿನಿ ಕೃಷ್ಣಮೂರ್ತಿ, ಬೆಂಗಳೂರು ಕೇಂದ್ರ ವಿಭಾಗದ ಐಜಿಪಿಯನ್ನಾಗಿ ಎಂ.ಚಂದ್ರಶೇಖರ್, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಐಜಿಪಿಯನ್ನಾಗಿ ವಿಪುಲ್ ಕುಮಾರ್, ಉತ್ತರ ಕನ್ನಡ-ಕಾರವಾರ, ಭಟ್ಕಳ ಉಪವಿಭಾಗದ ಸಹಾಯಕ ಉಪಪೊಲೀಸ್ ಆಯುಕ್ತರನ್ನಾಗಿ ರಂಜಿತ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿದೆ.