ವಾಷಿಂಗ್ಟನ್: ಮಹಾಮಾರಿ ಕೊರೋನಾ ಸೋಂಕು ನಿವಾರಣೆಗೆ ಮಲೇರಿಯಾ ರೋಗ ನಿರೋಧಕ ಹೈಡ್ರಾಕ್ಸಿ ಕ್ಲೋರೋಕ್ವೀನ್ ಸೂಕ್ತ ಎಂದು ಅಮೆರಿಕ ಹೇಳಿದೆ.
ಶುಕ್ರವಾರದಂದು ಶ್ವೇತಭವನದಲ್ಲಿ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್, ಹೈಡ್ರಾಕ್ಸಿ ಕ್ಲೋರೋಕ್ವೀನ್ ಸೋಂಕಿತರಿಗೆ ಬಳಸಲು ಅಡ್ಡಿ ಇಲ್ಲ ಎಂದಿದ್ದಾರೆ. ಅಮೆರಿಕನ್ ಫೆಡರಲ್ ಅಂಡ್ ರಿಸರ್ಚ್ ತಜ್ಞರು ಕೂಡಾ, ಕೊರೋನಾ ಸೋಂಕು ನಿವಾರಣೆಗೆ ಸದ್ಯ ಇದನ್ನೇ ಬಳಸಲು ಯಾವುದೇ ಅಡಚಣೆ ಇಲ್ಲ ಎಂದಿದ್ದಾರೆ.
ಹೈಡ್ರಾಕ್ಸಿಕ್ಲೋರೋಕ್ವೀನ್ ಅಮೆರಿಕದಲ್ಲೀಗ ಸಾಕಷ್ಟು ಲಭ್ಯವಿದೆ. ಕೊರೋನಾ ಸೋಂಕಿನಿಂದ ಬಳಲುತ್ತಿರುವ ಸೋಂಕಿತರಿಗೆ ಅಮೆರಿಕನ್ ವೈದ್ಯರು ಹೈಡ್ರಾಕ್ಸಿಕ್ಲೋರೋಕ್ವೀನ್ ನೀಡುತ್ತಿದ್ದು, ಇದು ರೋಗ ನಿರೋಧಕ ಔಷಧಿಯಾಗಿ ಸ್ಪಂದಿಸಿದೆ ಎಂಬುದನ್ನು ವೈದ್ಯರು ಖಚಿತಪಡಿಸಿದ್ದಾರೆ. ತೀವ್ರ ಸೋಂಕಿನಿಂದ ಬಳಲಿದ ಅಮೆರಿಕ ಪ್ರಜೆಯೊಬ್ಬರು ತಮಗೆ ವೈದ್ಯರು ಹೈಡ್ರಾಕ್ಸಿಕ್ಲೋರೋಕ್ವೀನ್ ನೀಡಿದ್ದುಇದರಿಂದ ತಾವು ಗುಣಮುಖರಾಗಿರುವುದಾಗಿ ಹೇಳಿದ್ದಾರೆ.
ಪಿಟ್ಸ್ ಬರ್ಗ್ ವಿವಿ ಸಂಶೋಧಕರಿಂದ ಪಿಟ್ಕೋವಿಕ್: ಮತ್ತೊಂದು ಕಡೆ, ಪಿಟ್ಸ್ ಬರ್ಗ್ ವಿಶ್ವ ವಿದ್ಯಾಲಯದಲ್ಲಿ ಸಂಶೋಧಕರು ತಾವು ಹೊಸದಾಗಿ ಕಂಡು ಹಿಡಿದಿರುವ ಕೊರೋನಾ ರೋಗ ನಿರೋಧಕ ಔಷಧಿಯನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದಾರೆ. ಇದಕ್ಕೆ ಇಲ್ಲಿನ ಸಂಶೋಧಕರು ಪಿಟ್ಕೋವಿಕ್ ಎಂದು ಹೆಸರನ್ನಿಟ್ಟಿದ್ದಾರೆ. ಹೆಬ್ಬೆಟ್ಟಿನ ಅಗಲದಷ್ಟು ಪಟ್ಟಿಯನ್ನು ಸಂಶೋಧಕರೀಗ ತಯಾರಿಸಿದ್ದು ಇಲಿ ದೇಹಕ್ಕೆ ಇದನ್ನು ಅಳವಡಿಸಿ ಜೈವಿಕ ಪ್ರತಿಸ್ಪಂದನೆಯನ್ನೂ ಗಮನಿಸಿದ್ದಾರೆ. ಇಲಿಗಳಲ್ಲಿ ರೋಗ ನಿರೋಧಕ ಶಕ್ತಿ ಕಂಡುಬಂದಿದ್ದು. ಇದನ್ನು ಸಮರ್ಥವಾಗಿ ಮನುಷ್ಯರ ಮೇಲೆ ಪ್ರಯೋಗಿಸಲು ಇನ್ನೂ ಕೆಲ ಅಗತ್ಯ ಪರೀಕ್ಷೆಗಳು ಅಗತ್ಯವಿದೆ ಎಂದಿದ್ದಾರೆ. ಪಟ್ಟಿಯನ್ನು ಬಳಸುವುದರಿಂದ ದೈಹಿಕವಾಗಿ ಯಾವುದೇ ನೋವು ಕಂಡುಬುರುವುದಿಲ್ಲ ಎಂದೂ ವೈದ್ಯರು ಸುದ್ದಿಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ.