ಹೊಸದಿಗಂತ ಆನ್ ಲೈನ್ ಡೆಸ್ಕ್:
ಬ್ರಿಟನ್ ನ ಕೊರೋನಾ ರೂಪಾಂತರ ದೇಶದಲ್ಲಿ ಆತಂಕ ಮೂಡಿಸುತ್ತಿದ್ದು, ಈ ಹಿನ್ನೆಲೆ 2021ರ ಗಣರಾಜ್ಯೋತ್ಸವದಲ್ಲಿ ಭಾರೀ ಬದಲಾವಣೆ ಮಾಡಿರುವುದಾಗಿ ತಿಳಿದುಬಂದಿದೆ.
ಇದೇ ಮೊದಲ ಬಾರಿಗೆ ಕೆಂಪು ಕೋಟೆಯಲ್ಲದೇ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಪರೇಡ್ ಕೊನೆಯಾಗಲಿದ್ದು, .ಪರೇಡ್ ಅಂತರವನ್ನು 8.2 ಕಿ.ಮೀನಿಂದ 3.3 ಕಿ.ಮೀಗೆ ಇಳಿಸಲಾಗಿದೆ.
ಇನ್ನು ರಾಜಪಥ್ ನಲ್ಲಿ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಕೆಲವೇ ಮಂದಿಗೆ ಅವಕಾಶ ಕಲ್ಪಿಸಲಾಗಿದೆ. ಈ ವರ್ಷ 25,000 ಮಂದಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ಇದರಲ್ಲಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಅನುಮತಿ ಇಲ್ಲ.
ಕೋವಿಡ್ ಮಾರ್ಗಸೂಚಿ ಪ್ರಕಾರ, ಪರೇಡ್ ನಡೆಸುವ ತುಕಡಿಗಳು ಫೇಸ್ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಸಶಸ್ತ್ರ ಪಡೆ, ಪ್ಯಾರಾ ಮಿಲಿಟರಿಯಿಂದ ಪರೇಡ್ ನಡೆಸುವ ತುಕಡಿಗಳ ಗಾತ್ರವೂ 144 ಮಂದಿ ಬದಲು 96 ಮಂದಿಗೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೇಡ್ ವಿಜಯ್ ಚೌಕ್ ನಿಂದ ಆರಂಭಗೊಂಡು ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊನೆಗೊಳ್ಳುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆಯೂ ಕೂಡ ಕಡಿಮೆ ಇರುವುದು.