ಸಕಲೇಶಪುರ: ತಾಲೂಕಿನ ಮಳಲಿ ಗ್ರಾಮದಲ್ಲಿ ಕಾಡಾನೆಯೊಂದು ಮರಿ ಹಾಕಿದೆ. ಕಾಲು ಪೆಟ್ಟಾಗಿ ಕಾಡುತ್ತಿರುವ ತೀವ್ರ ನೋವಿನಲ್ಲೂ ಮಾತೃವಾತ್ಸಲ್ಯ ಕಾಣದೆ ಕಣ್ಣೀರಿಡುತ್ತಿದೆ. ಮರಿಯಾನೆ ಸ್ಥಿತಿ ಕಂಡು ನೋಡುಗರಿಗೆ ಮಮ್ಮಲ ಮರುಗುವಂತೆ ಮಾಡುತ್ತಿದೆ.
ಮಳಲಿಯ ಅನಿಲ್ ಎಂಬುವರ ಕಾಫಿ ತೋಟದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಆನೆ ಮರಿ ಹಾಕಿದೆ. ಈ ಸಂದರ್ಭದಲ್ಲಿ ಮರಿ ಸ್ಥಳದಿಂದ ಏಳಲಾರದ ಸ್ಥಿತಿಯಲ್ಲಿದೆ. ಯಾವುದೋ ಹೊಂಡಕ್ಕೆ ಸಿಲುಕಿ ಮುಂಗಾಲು ಮುರಿದಿದೆ. ತನ್ನ ಮರಿಯನ್ನು ಎತ್ತಿ ನಿಲ್ಲಿಸಲು, ಹಾಲುಣಿಸಲು ಎರಡು ದಿನಗಳ ಕಾಲ ಯತ್ನಿಸಿದ್ದ ತಾಯಿಆನೆ ಯಾರನ್ನೂ ಸಮೀಪಕ್ಕೆ ಹೋಗಲು ಬಿಟ್ಟಿರಲಿಲ್ಲ. ಈ ವೇಳೆ ಗಜಪಡೆ ಕೂಡ ತಾಯಿ ಆನೆಗೆ ಸಾಥ್ ನೀಡಿದ್ದವು.
ಕಾಫಿ ತೋಟದಲ್ಲಿ ಮರಿ ಹಾಕಿರುವ ಕಾಡಾನೆ, ಮರಿ ಹಾಕಿರುವ ವಿಷಯ ಎರಡು ದಿನ ತಡವಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಕಳೆದ ಮೂರು ದಿನಗಳಿಂದ ಅರಣ್ಯ ಇಲಾಖೆ ವತಿಯಿಂದ ಮರಿ ಆನೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಗುರುವಾರ ರಾತ್ರಿ ಸ್ಥಳಕ್ಕೆ ಬಂದಿದ್ದ ತಾಯಿ ಆನೆ ಮತ್ತೆ ಈ ಸ್ಥಳಕ್ಕೆ ಬಂದಿಲ್ಲ. ಸದ್ಯ ಪಶುವೈದ್ಯರು ಡ್ರಿಪ್ ಹಾಕಿ, ಬಾಟಲಿಯಲ್ಲಿ ಹಾಲು ಕುಡಿಸಿ ಆರೈಕೆ ಮಾಡುತ್ತಿದ್ದಾರೆ. ಮರಿಯಾನೆ ಮಾತ್ರ, ಕಾಲಿನ ನೋವಿನ ಜತೆಗೆ ತಾಯಿಗಾಗಿ ರೋದಿಸುತ್ತಿದೆ.
ತಾಯಿ ಆನೆ ಮರಿಯಾನೆಯನ್ನು ಕರೆದೊಯ್ಯುತ್ತದೆ ಎಂಬ ನಿರೀಕ್ಷೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತಿದ್ದಾರೆ. ಶುಕ್ರವಾರ ರಾತ್ರಿಯೊಳಗೆ ತಾಯಿ ಆನೆ ಮರಿಯಾನೆಯನ್ನು ಕರದೊಯ್ಯದಿದ್ದಲ್ಲಿ ಶನಿವಾರ ಸಕ್ಕರೆ ಬೈಲು ಅರಣ್ಯಾಧಾಮಕ್ಕೆ ಕಳುಹಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.