Wednesday, July 6, 2022

Latest Posts

ಹೊಟೇಲ್‌ ಓಪನ್: ಮಂಗಳೂರಿನಲ್ಲಿ ಮತ್ತೆ ಗೋಳಿಬಜೆ, ಪೋಡಿ, ಮಸಾಲೆದೋಸೆಯ ಘಮ ಘಮ!

ಮಂಗಳೂರು: ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಮಾಲ್, ಹೊಟೇಲ್‌ಗಳು ಸೋಮವಾರ ಬಾಗಿಲು ತೆರೆದಿವೆ.
ಮೊದಲ ದಿನವಾಗಿದ್ದರಿಂದ ಹಾಗೂ ನಗರದಲ್ಲಿ ವ್ಯಾಪಾರ ವಹಿವಾಟುಗಳು ಈಗಷ್ಟೆ ಚುರುಕು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಲ್, ಹೊಟೇಲ್‌ಗಳಲ್ಲಿ ಜನರ ಸ್ಪಂದನೆ ನೀರಸವಾಗಿತ್ತು.
ನಗರದ ಮಾಲ್‌ಗಳು ಬೆಳಗ್ಗೆ 10ರಿಂದ ರಾತ್ರಿ 8.30ರ ವರೆಗೆ ತೆರೆದುಕೊಳ್ಳಲಿವೆ. ಮಾಲ್‌ಗಳಲ್ಲಿ ಲಾಕ್‌ಡೌನ್ ಸಡಿಲಿಕೆ ನಿಯಮ ಕಡ್ಡಾಯ ಪಾಲನೆಗೆ ಒತ್ತು ನೀಡಲಾಗಿದೆ. ಸಿಟಿ ಸೆಂಟರ್ ಮಾಲ್ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಂಡಿತು. ಎಲ್ಲ ಮಾಲ್‌ಗಳಲ್ಲಿ ಶೇ.85 ರಷ್ಟು ಅಂಗಡಿಗಳು ತೆರೆದುಕೊಂಡಿವೆ. ಫೋರಂ ಫಿಜಾ ಮಾಲ್‌ನಲ್ಲಿ ಬಯೋ ಸ್ಯಾನಿಟೈಸರ್ ಅಳವಡಿಸಲಾಗಿದೆ. ದ್ವಾರದ ಮೂಲಕ ಹಾದುಹೋಗುವಾಗ ಸ್ವಯಂ ಆಗಿ ಸ್ಯಾನಿಟೈಸರ್ ಸಿಂಪರಣೆ ಆಗಲಿದೆ. ಇದರಲ್ಲಿ ಚರ್ಮಕ್ಕೆ ಯಾವುದೇ ತೊಂದರೆ ಆಗದು. ಇದಲ್ಲದೆ ಎಲ್ಲ ಪ್ರವೇಶ ದ್ವಾರಗಳಲ್ಲೂ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಅಳವಡಿಸಲಾಗಿದೆ. ಮಾಲ್‌ಗಳ ಪ್ರತಿ ಅಂಗಡಿಗಳಲ್ಲೂ ಸ್ಯಾನಿಟೈಸರ್ ಇರಿಸಲಾಗಿದೆ. ವಾಶ್‌ರೂಂ, ಎಸ್ಕಲೇಟರ್ ಹಾಗೂ ಲಿಫ್ಟ್‌ಗಳಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಲು ಅವಕಾಶವಿಲ್ಲ.
ಮಾಲ್‌ಗಳಲ್ಲಿ ಸಿನಿಮಾ ಹಾಗೂ ಗೇಮ್ಸ್ ಹೊರತುಪಡಿಸಿ ಬೇರೆ ಎಲ್ಲ ವ್ಯಾಪಾರ ವಹಿವಾಟುಗಳು ಆರಂಭಗೊಂಡಿವೆ. ಫೋರಂ ಮಾಲ್ ಬಿಟ್ಟು ಉಳಿದ ಮಾಲ್‌ಗಳಲ್ಲಿ ಫುಡ್ ಕೋರ್ಟ್ ಇನ್ನಷ್ಟೆ ಕಾರ್ಯಾರಂಭವಾಗಬೇಕು. ಫೋರಂ ಫಿಜಾ ಮಾಲ್‌ನಲ್ಲಿ ಶೀಘ್ರವೇ ಗ್ರಾಹಕರ ಪ್ರವೇಶಕ್ಕೆ ಟೋಕನ್ ವ್ಯವಸ್ಥೆ ಜಾರಿಗೆ ಬರಲಿದೆ. ಗ್ರಾಹಕರು ಫೋರಂ ಮಾಲ್‌ನ ವೆಬ್‌ಸೈಟ್‌ಗೆ ತೆರಳಿ ಟೋಕನ್‌ನ್ನು ಮೊಬೈಲ್‌ಗೆ ಡೌನ್‌ಲೋಡ್ ಮಾಡಬೇಕು.
ಇದು ಅಸಾಧ್ಯವಾದರು ಮಾಲ್‌ನ ಪ್ರವೇಶದಲ್ಲಿ ಟೋಕನ್ ಪಡೆಯಲು ವ್ಯವಸ್ಥೆ ಮಾಡಲಾಗುತ್ತದೆ. ಟೋಕನ್‌ನಲ್ಲಿ ಮಾಲ್ ಪ್ರವೇಶಿಸುವ ಅವಧಿಯನ್ನು ನೀಡಲಾಗುತ್ತದೆ. ಜತೆಗೆ ಗ್ರಾಹಕರ ಬಗ್ಗೆ ವಿವರ ಪಡೆಯಲಾಗುತ್ತದೆ. ಒಂದೆರಡು ದಿನಗಳಲ್ಲಿ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ಮಾಲ್‌ನ ಉಸ್ತುವಾರಿ ಸುನೀಲ್ ತಿಳಿಸಿದ್ದಾರೆ.
ಫುಡ್ ಕೋರ್ಟ್‌ಗಳು ಸೋಮವಾರ ಆರಂಭವಾಗಿಲ್ಲ
ಲಾಕ್‌ಡೌನ್ ಸಡಿಲಿಕೆ ಬಳಿಕ ನಗರದ ಹೊಟೇಲ್‌ಗಳಲ್ಲಿ ಇದುವರೆಗೆ ಪಾರ್ಸೆಲ್‌ಗೆ ಮಾತ್ರ ಅವಕಾಶವಿತ್ತು. ಸೋಮವಾರ ಪೂರ್ಣ ಪ್ರಮಾಣದಲ್ಲಿ ಹೊಟೇಲ್‌ಗಳು ತೆರೆದುಕೊಂಡಿವೆ. ಕೆಲವೇ ಹೊಟೇಲ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿದ್ದರೆ, ಇನ್ನೂ ಕೆಲವು
ಹೊಟೇಲ್‌ಗಳು ಹಿಂದಿನಂತೆ ಯಥಾಸ್ಥಿತಿಯಲ್ಲಿ ವಹಿವಾಟು ನಡೆಸಿವೆ. ಆದರೆ, ಗ್ರಾಹಕರ ಸಂಖ್ಯೆ ವಿರಳವಾಗಿತ್ತು.
ಸಿಟಿ ಸೆಂಟರ್ ಮಾಲ್, ಭಾರತ್ ಮಾಲ್‌ಗಳಲ್ಲಿ ಫುಡ್ ಕೋರ್ಟ್‌ಗಳು ಸೋಮವಾರ ಆರಂಭವಾಗಿಲ್ಲ. ಹೊಟೇಲ್ ಕಾರ್ಮಿಕರು ಅವರ ಊರುಗಳಿಗೆ ತೆರಳಿರುವುದು ಹಾಗೂ ಸಾಕಷ್ಟು ಸಿದ್ಧತೆಗಳನ್ನು ಮಾಡದ ಕಾರಣ ಒಂದರೆಡು ದಿನಗಳಲ್ಲಿ ಹೊಟೇಲ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss