ಹೊತ್ತಿ ಉರಿದ ಯಡವನಾಡು ಮೀಸಲು ಅರಣ್ಯ : 300 ಎಕರೆ ಪ್ರದೇಶ ಬೆಂಕಿಗಾಹುತಿ

0
158

ಕುಶಾಲನಗರ:  ಸೋಮವಾರಪೇಟೆ ತಾಲೂಕಿನ ಯಡವನಾಡು  ಗ್ರಾಮ ಸಮೀಪದಲ್ಲಿರುವ ಯಡವನಾಡು ಮೀಸಲು  ಅರಣ್ಯ ಪ್ರದೇಶದಲ್ಲಿ ಬುಧವಾರ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಸುಮಾರು 300 ಎಕರೆಗೂ ಅಧಿಕ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.
ಬುಧವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ   ಯಡವನಾಡು  ಪೂರ್ವ  ಮತ್ತು ಪಶ್ಚಿಮ ಭಾಗದ ಕಾಡುಗಳಲ್ಲಿಕ ಕಾಲದಲ್ಲಿ ಬೆಂಕಿಯ  ಹೂಗೆ ಕಾಣುತ್ತಿದಂತೆ  ಸಿಬ್ಬಂದಿಗಳು ಧಾವಿಸಿದ್ದು, ಅಷ್ಟರಲ್ಲೇ  ಸುಡು ಬಿಸಿಲು ಹಾಗೂ ಗಾಳಿಗೆ ಅರಣ್ಯ ದಗದಗನೇ ಉರಿಯಲಾರಂಭಿಸಿದೆ.
ಯಡವನಾಡು ಮೀಸಲು ಅರಣ್ಯ ಪ್ರದೇಶವು  ಸೋಮವಾರಪೇಟೆ ರಸ್ತೆಯ  ಎರಡೂ ಕಡೆಗಳಲ್ಲಿ ವ್ಯಾಪಿಸಿದೆ. ಈ ಅರಣ್ಯದ ಸಮೀಪದಲ್ಲಿ  ಸಜ್ಜಳ್ಳಿ ಹಾಡಿ ಮತ್ತು  ಪೂರ್ವ ಭಾಗದಲ್ಲಿ ಯಡವನಾಡು ಹಾಡಿಗಳಿವೆ.  ಹಾಡಿ ಪಕ್ಕದಲ್ಲಿ ಅರಣ್ಯ ಉರಿಯುತ್ತಿದ್ದ ಸಂದರ್ಭ ಬೆಂಕಿ  ಹಾಡಿ  ಸಮೀಪಕ್ಕೆ ಬರದಂತೆ  ಹುದುಗೂರು ಗ್ರಾಮದ ನೂರಾರು ಯುವಕರು  ನೋಡಿಕೊಳ್ಳುವುದರೊಂದಿಗೆ    ಅರಣ್ಯ ಇಲಾಖೆಯವರಿಗೆ ಸಹಕರಿಸಿದರು.
4 ಅಗ್ನಿಶಾಮಕ ವಾಹನ ಬಳಕೆ 
ಬೆಂಕಿ  ಕಾಣಿಸಿಕೊಂಡ ತಕ್ಷಣ  ಅರಣ್ಯ ಇಲಾಖೆಯವರು ಕುಶಾಲನಗರ ಮತ್ತು ಸೋಮವಾರಪೇಟೆ ಅಗ್ನಿಶಾಮಕ ದಳದವರಿಗೆ  ವಿಷಯ ಮುಟ್ಟಿಸಿದರು. ಅಗ್ನಿಶಾಮಕ ದಳದವರು ತಕ್ಷಣ ಬಂದರಾದರೂ, ಅರಣ್ಯದ ಒಳಗೆ ಹೋಗಿ ನಂದಿಸಲು ಸಾದ್ಯವಾಗಲಿಲ್ಲ. ಆದರೆ  ಸಿಬ್ಬಂದಿಗಳು ರಸ್ತೆಯ ಎರಡೂ ಕಡೆಯಿಂದ ಭಾರೀ ಬೆಂಕಿ ಉರಿಯುತ್ತಿದ್ದುದನ್ನು  ಮತ್ತು ಈ ವ್ಯಾಪ್ತಿಯ  ಹಾಡಿಗೆ   ಬೆಂಕಿ ಕಿಡಿ ಹಾರುವುದನ್ನು  ತಪ್ಪಿಸಲು ಹರಸಾಹಸ ಪಟ್ಟರು,
ಅಗ್ನಿಶಾಮಕದಳದ ವಾಹನದಲ್ಲಿ ನೀರು ಖಾಲಿಯಾದ ನಂತರ ಸಮೀಪದ ಯಡವನಾಡಿನ  ಅರಸ್  ಎಂಬವರ  ಮನೆ ಹತ್ತಿರದಿಂದ  ನಾಲ್ಕು ನಾಲ್ಕು ಬಾರಿ  ನೀರನ್ನು ತುಂಬಿಕೊಂಡು  ಬಂದು ರಸ್ತೆ ಬಂದಿ ಬೆಂಕಿ ಆರಿಸುವಲ್ಲಿ ತೊಡಗಿದರು.
ಯಡವನಾಡು ಪಶ್ಚಿಮ ಭಾಗದ ಅರಣ್ಯ ಸಜ್ಜಳ್ಳಿ ಹಾಡಿ ಮತ್ತು ಐಗೂರು ಸಮೀಪದ ಕಾಜೂರು  ವ್ಯಾಪ್ತಿಯವರೆದೆ ಇದ್ದು, ಅಲ್ಲಿಯವರೆಗೂ ಬೆಂಕಿ  ಅನೇಕ ಬೃಹತ್ ಮರಗಳು ಸೇರಿದಂತೆ ಬಹುತೇಕ ಅರಣ್ಯವನ್ನು ಆಹುತಿ ಪಡೆದುಕೊಂಡಿದೆ.
ಕಿಡಿಗೇಡಿಗಳ ಕೈವಾಡದ ಶಂಕೆ 
ಯಡವನಾಡು ಮೀಸಲು  ಅರಣ್ಯ ಪ್ರದೇಶದ  ಎಂಟು ಕಡೆಗಳಲ್ಲಿ ಏಕಕಾಲದಲ್ಲಿ  ಬೆಂಕಿ ಬಿದ್ದಿದ್ದು, ಇದರಲ್ಲಿ ಯಾರೋ ಕೀಡಿಕೇಡಿಗಳ ಕೈವಾಡ ಇರುವ ಬಗ್ಗೆ ಅರಣ್ಯ ಇಲಾಖೆ ಶಂಕೆ ವ್ಯಕ್ತಪಡಿಸಿದೆ.
ಬೆಂಕಿಗೆ ಅರಣ್ಯ ಹುತಿಯಾದ ಪ್ರದೇಶಕ್ಕೆ ಜಿಲ್ಲಾ  ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಭೇಟಿ ನೀಡಿ ಪರಿಶೀಲಿಸಿದ್ದು,  ಶಂಕಿತರ ಬಗ್ಗೆ ಮಾಹಿತಿ ನೀಡುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಅರಣ್ಯಕ್ಕೆ ಬೆಂಕಿ ಬಿದ್ದಿರುವ  ವಿಷಯ ತಿಳಿಯುತ್ತಿದ್ದಂತೆ   ಹೆಬ್ಬಾಲೆ, ಬಾಣಾವರ ಮತ್ತು ಸೋಮವಾರಪೇಟೆ  ವಿಭಾಗದ  ನೂರಾರು   ಅರಣ್ಯ   ಸಿಬ್ಬಂದಿಗಳು ಹಾಗೂ ಹುದುಗೂರು ಗ್ರಾಮದ  ನೂರಾರು ಯುವಕರು ಬೆಂಕಿ  ಇತರೆಡಗೆ ಹರಡದಂತೆ ತಡೆಯುವಲ್ಲಿ ಯಶಸ್ವಿಯಾದರು.
ಕಣ್ಣೀರಿಟ್ಟ ಅಧಿಕಾರಿ 
ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ  ಒಂದೆಡೆ ಬೆಂಕಿ ಹರಡಿದಾಗ  ನಂದಿಸಲು  ಎಷ್ಟೇ  ಪ್ರಯತ್ನ ಪಟ್ಟರೂ ಅದು ಸಾಧ್ಯವಾಗದಿದ್ದಾಗ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶಮಾ ಕಣ್ಣೀರಿಟ್ಟರು.

LEAVE A REPLY

Please enter your comment!
Please enter your name here