Tuesday, August 16, 2022

Latest Posts

ಹೊನ್ನಾವರದಲ್ಲಿ 25 ಲಕ್ಷ ಮ್ಯಾಟ್ರಿಕ್ ಟನ್ ಸಾಮರ್ಥ್ಯದ ಬಂದರು ನಿರ್ಮಾಣ: ಸಂಸದ ಅನಂತಕುಮಾರ ಹೆಗಡೆ

ಕುಮಟಾ: ಕಾರವಾರದಿಂದ ಭಟ್ಕಳ ವರೆಗೆ ಕರಾವಳಿ ಅರ್ಥಿಕ ವಲಯ ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹೊನ್ನಾವರದಲ್ಲಿ 25 ಲಕ್ಷ ಮ್ಯಾಟ್ರಿಕ್ ಟನ್ ಸಾಮರ್ಥ್ಯದ ಬಂದರು ನಿರ್ಮಾಣವಾಗಲಿದೆ. 1 ಲಕ್ಷ ಕೋಟಿ ರು.ಗಳಷ್ಟು ಅನುದಾನವು ಜಿಲ್ಲೆಗೆ ಕೇಂದ್ರದಿಂದ ಬರಲಿದ್ದು ಯಾರೂ ಕಲ್ಪನೆ ಮಾಡಲಾಗದ ರೀತಿಯಲ್ಲಿ ಜಿಲ್ಲೆ ಅಭಿವೃದ್ಧಿ ಕಾಣಲಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಲೆಕೇರಿ, ಕಾರವಾರ ಹಾಗೂ ಹೊನ್ನಾವರದಲ್ಲಿ ಬಂದರು ಅಭಿವೃದ್ಧಿ ಆಗಲಿದೆ. ಮಂಗಳೂರಿಗಿಂತ ಹತ್ತುಪಟ್ಟು ದೊಡ್ಡದಾಗಿ ಹೊನ್ನಾವರ ಬಂದರು ಅಭಿವೃದ್ಧಿ ಹೊಂದಲಿದೆ. ಉತ್ತರ ಕನ್ನಡ ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಯನ್ನು ಲಕ್ಷದಲ್ಲಿಟ್ಟುಕೊಂಡು ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಜಿಲ್ಲೆಯು ಕಲ್ಪನೆಗೂ ಸಿಗದಂತೆ ಬದಲಾವಣೆಯಾಗಲಿದ್ದು ಕೈಗಾರಿಕೆ, ನಾಗರಿಕ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ಪ್ರವಾಸೋದ್ಯಮ ಸೇರಿದಂತೆ ಎಲ್ಲವೂ ಹೊಸ ಸ್ವರೂಪವನ್ನು ಪಡೆಯಲಿದೆ. ಇದರಿಂದ ಜನಸಂಖ್ಯೆಯೂ ಜಾಸ್ತಿಯಾಗಲಿದ್ದು 30ಕ್ಕೂ ಹೆಚ್ಚು ಫೈವ್ ಸ್ಟಾರ್ ಹೋಟೆಲ್ ಗಳು, 15 ಸಾವಿರ ಸೆಲೂನ್ ಗಳು ತಲೆ ಎತ್ತಲಿವೆ ಎಂದು ಹೇಳಿದರು.
ರಾಜ್ಯದಲ್ಲಿ ನಮ್ಮ ಪಕ್ಷದ ಸರ್ಕಾರ ಇದ್ದರಿಂದ ಕರಾವಳಿ ಆರ್ಥಿಕ ವಲಯ ಸ್ಥಾಪನೆಯ ಕನಸು ಈಡೇರಲು ಸಾಧ್ಯವಾಗಿದೆ. ಆರ್ಥಿಕ ವಲಯ ಸ್ಥಾಪನೆಯಿಂದ ಜಿಲ್ಲೆಯ ಬಂದರುಗಳು ಹಾಗು ಕೈಗಾರಿಕಾ ವಲಯ ಅಭಿವೃದ್ಧಿಯಾಗುವುದು. ಜೊತೆಗೆ ಜಿಲ್ಲೆಗೆ ಪೂರಕವಾದಂತಹ ಕೈಗಾರಿಕೆಗಳನ್ನು ಇಲ್ಲಿಗೆ ತರಲು ಸಾಧ್ಯವಾಗುವುದು. ಕೇಂದ್ರ ಸರ್ಕಾರ ನೀಡಿರುವ ಒಪ್ಪಿಗೆಯಂತೆ ಜಿಲ್ಲೆಯ ಪ್ರವಾಸೋದ್ಯಮದ ಜೊತೆಗೆ ಬಂದರುಗಳನ್ನು ಕರ್ನಾಟಕ ಮೇರಿಟೈನ್ ಬೋರ್ಡ್ ಅಡಿಯಲ್ಲಿ ಅಭಿವೃದ್ಧಿಸಲಾಗುವುದು.
ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ನೆರೆಯಿಂದ ತೊಂದರೆ ಅನುಭವಿಸುವವರಿಗೆ ಪಾರ್ಯಾಯ ವ್ಯವಸ್ಥೆ ಮಾಡುವುದಕ್ಕಾಗಿ ೭೧೭ ಎಕ್ರೆ ಪ್ರದೇಶವನ್ನು ಗುರುತಿಸಲಾಗಿದೆ. ಈ ಪ್ರದೇಶವನ್ನು ಹೇಗೆ ಸದ್ಬಳಕೆ ಮಾಡಿಕೊಂಡು ನೆರೆಪೀಡಿತರಿಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಅನುಕೂಲ ಎಂಬುದನ್ನ ನಮ್ಮ ಶಾಸಕರು ಅಲೋಚಿಸಿ ನಿರ್ಧರಿಸಲಿದ್ದಾರೆ. ಪ್ರತಿತಾಲೂಕಿನಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಅನುಕೂಲವಾಗುವಂತೆ ೫೦೦ ಎಕರೆ ಪ್ರದೇಶ ಗುರುತಿಸಲು ಅಧಿಕಾರಿಗಳಿಗೆ ಈಗಾಗಲೆ ಸೂಚಿಸಲಾಗಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ಕೇಂದ್ರ ಸರ್ಕಾರ ಮಾಡಿದ್ದು, ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕರಾವಳಿ ಅರ್ಥಿಕ ವಲಯ ನಿರ್ಮಾಣದಿಂದ ಈ ಜಿಲ್ಲೆಯ ಕೌಶಲ್ಯವಂತ ಯುವಕ-ಯುವತಿಯರಿಗೆ ಭಾರಿ ಲಾಭವಾಗಲಿದೆ ಎಂದು ಸಂಸದ ಅನಂತಕುಮಾರ ಅಭಿಪಾಯಪಟ್ಟರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ, ವಿಧಾನಪರಿಷತ್ನ ನೂತನ ಸದಸ್ಯ ಶಾಂತಾರಾಮ ಸಿದ್ದಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ ಹಾಗೂ ಸ್ಥಳೀಯ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
 ವಿಮಾನ ನಿಲ್ದಾಣ 2024ರಲ್ಲಿ ಪ್ರಾರಂಭ
ಜಿಲ್ಲೆಯ ಅಭಿವೃದ್ಧಿಯನ್ನು ದೃಷ್ಠಿಯಿಂದ ಅಂಕೋಲಾದಲ್ಲಿ ೨೦೨೪ ರಲ್ಲಿ ನಾಗರಿಕರು ವಿಮಾನ ಯಾನ ಆರಂಭಿಸುವ ಉದ್ದೇಶದಿಂದ ಈ ಕಾರ್ಯಕ್ಕೆ ಅವಶ್ಯಕ ಭೂಸ್ವಾಧೀನ ಕಾರ್ಯ ಈಗ ಪ್ರಗತಿಯಲ್ಲಿದೆ . ಸಾಗರಮಾಲಾ ಯೋಜನೆಯಡಿ ೧೭೦೦ ಕೋಟಿ ರು. ವೆಚ್ಚದಲ್ಲಿ ಕುಮಟಾ-ಶಿರಸಿ-ತಡಸ್ ರಸ್ತೆಯನ್ನು ಹೆದ್ದಾರಿಯನ್ನಾಗಿ ಪರಿವರ್ತಿಸಲು ಈಗಾಗಲೆ ಕ್ರಮಕೈಗೊಳ್ಳಲಾಗಿದೆ. ಈ ರಸ್ತೆಗೆ ಪರಿಸರ ಇಲಾಖೆ ಈಗ ಅನುಮತಿ ನೀಡಿದೆ ಎಂದರು.
9 ವಿಶೇಷ ಸೇತುವೆಗಳ ನಿರ್ಮಾಣ
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಿಂದ ಮೊದಲನೇ ಭಾಗವಾಗಿ 164 ಕೋಟಿ, ಎರಡನೇ ಭಾಗವಾಗಿ145 ಕೋಟಿ ರು. ಹಣವನ್ನು ವಿನಿಯೋಗಿಸಲಾಗುವುದು. ಮುಖ್ಯವಾಗಿ ಜಿಲ್ಲೆಯಲ್ಲಿ 9 ಬೃಹತ್‌ ಸೇತುವೆಗಳನ್ನು ಈ ಯೋಜನೆಯಿಂದ ನಿರ್ಮಿಸಲಾಗುವುದು ಎಂದು ಸಂಸದರು ಹೇಳಿದರು.
ಮನಗೆದ್ದ ಶಾಂತಾರಾಮ ಸಿದ್ದಿ
ಸುದ್ದಿಗೋಷ್ಠಿ ನಂತರ ವಿಧಾನಪರಿಷತ್ನ ನೂತನ ಸದಸ್ಯ ಶಾಂತಾರಾಮ ಸಿದ್ದಿಗೆ ಬಿಜೆಪಿ ಕಾರ್ಯಕರ್ತರು ಸನ್ಮಾನಿಸಿದರು. ಎಲ್ಲಾ ಕಡೆ ನೆರೆ ಬಂದು ಜನರು ಸಂಕಷ್ಟದಲ್ಲಿರುವಾಗ ನನಗೆ ಸನ್ಮಾನ ಬೇಡವೆಂದು ಹೇಳುವ ಮೂಲಕ ಸಿದ್ದಿಯವರು ಎಲ್ಲರ ಮನಗೆದ್ದರು. ಆದರೂ ಕಾರ್ಯಕರ್ತರ ಪ್ರೀತಿ, ಬಲವಂತಕ್ಕೆ ಮಣಿದು ಸನ್ಮಾನ, ಗೌರವವನ್ನು ಸ್ವೀಕರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss