Thursday, June 30, 2022

Latest Posts

ಹೊಸದಿಗಂತ ವರದಿಗೆ ಸ್ಪಂದನೆ| ಭಾಗ್ಯಶ್ರೀ ಪದವಿ ಶಿಕ್ಷಣಕ್ಕೆ ಸಿಕ್ಕಿತು ನೆರವಿನ ಭಾಗ್ಯ!

ಬಂಟ್ವಾಳ: ಬಡತನದ ಮಧ್ಯೆ ದ್ವಿತೀಯ ಪಿಯುಸಿಯಲ್ಲಿ 467 ಅಂಕ ಪಡೆದು ಸಾಧನೆಗೈದ ಬಂಟ್ವಾಳ ತಾಲೂಕು ಕೂರಿಯಾಳ ಗ್ರಾಮದ ವಿಕಲಚೇತನ ಭಾಗ್ಯಶ್ರೀಗೆ ಮುಂದಿನ ಪದವಿ ಶಿಕ್ಷಣ ಮುಂದುವರಿಸಲು ನೆರವಿನ ಭಾಗ್ಯ ದೊರೆತಿದೆ. ಗುರುವಾರ ‘ಹೊಸದಿಗಂತ’ದಲ್ಲಿ  “ಪಿಯುಸಿಯಲ್ಲಿ 467: ಭೇಷ್ ಭಾಗ್ಯಶ್ರೀ ಭೇಷ್” ಎಂಬ ಶಿರೋನಾಮೆಯಲ್ಲಿ ಪ್ರಕಟಗೊಂಡ ಸುದ್ದಿಗೆ ಸ್ಪಂದಿಸಿರುವ ಫರಂಗೀಪೇಟೆ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಅವರು ತಕ್ಷಣ  ಭಾಗ್ಯಶ್ರೀಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕಾಲೇಜ್ ಗೆ ತರಳಿ ಪದವಿ ಶಿಕ್ಷಣ ಪೂರೈಸುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ಮೂರುವರ್ಷ ಪದವಿ ಶಿಕ್ಷಣಕ್ಕೆ ಬೇಕಾಗುವ ವ್ಯವಸ್ಥೆಯನ್ನು ಸೇವಾಂಜಲಿ ಪ್ರತಿಷ್ಠಾನದ ಮೂಲಕ ಕಲ್ಪಿಸುವ ಭರವಸೆಯನ್ನು ನೀಡಿದ್ದಲ್ಲದೆ ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಪ್ರಾಂಶುಪಾಲರೊಂದಿಗೂ ಕೆ.ಕೆ.ಪೂಂಜಾ ಅವರು ಮಾತುಕತೆಯನ್ನು ನಡೆಸಿದ್ದಾರೆ.

ಸಾಮಾಜಿಕ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿರುವ ಕೆ.ಕೆ.ಪೂಂಜಾ ಅವರ ನೇತೃತ್ವದ ಸೇವಾಂಜಲಿ ಪ್ರತಿಷ್ಠಾನ ಕೇವಲ ರಕ್ತದಾನ, ವೈದ್ಯಕೀಯ ಶಿಬಿರಗಳು ಮಾತ್ರವಲ್ಲ ಕಡುಬಡತನದಲ್ಲಿರುವ ಮತ್ತು ವಿಕಲಚೇತನ ಸಾಧಕರನ್ನು ಗುರುತಿಸಿ ಅವರಿಗೆ ನೆರವು ಒದಗಿಸಿದ ಪ್ರಶಂಸೆಗೂ ಪಾತ್ರವಾಗಿದೆ. ಭಾಗ್ಯಶ್ರೀ ಗೆ ಪದವಿ ಶಿಕ್ಷಣದ ಜೊತೆಗೆ ವಿಕಲಚೇತನ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸರಕಾರದ ಹಲವು ಯೋಜನೆಗಳಿದ್ದು,ಈ ಮೂಲಕವು ನೆರವು ಒದಗಿಸುವ ಭರವಸೆಯನ್ನು ಕೃಷ್ಣಕುಮಾರ್ ಪೂಂಜಾ ನೀಡಿದ್ದಾರೆ. ದೂರ ಶಿಕ್ಷಣದ ಮೂಲಕ ಬಿ.ಕಾಂ. ಪದವಿ ಪಡೆಯಬೇಕೆಂಬ ಆಸೆ ಪಟ್ಟಿದ್ದ ಭಾಗ್ಯಶ್ರೀ, ಕೃಷ್ಣ ಕುಮಾರ್ ಪೂಂಜಾ ಅವರ ಅಭಯಕ್ಕೆ  ಇದೀಗ ತರಗತಿಗೆ  ತೆರಳಿ ಪದವಿ ಶಿಕ್ಷಣ ಪಡೆಯಲು ಸಮ್ಮತಿಸಿದ್ದು,ಆಕೆಯ ಹೆತ್ತವರಲ್ಲು ಸಂತಸ ಮೂಡಿದೆ. ಈ ನಡುವೆ ಮುಂಬೈ ಕುಲಾಲ ಸಂಘ ಸಹಿತ ಇನ್ನು ಕೆಲ ದಾನಿಗಳು ಕೂಡ ನೆರವು ನೀಡುವ ಭರವಸೆಯಿತ್ತಿದ್ದಾರೆ.  ವಿಕಲಚೇತನ ವಿದ್ಯಾರ್ಥಿನಿ ಬಡತನದ ಮಧ್ಯೆಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 467 ಅಂಕ ಪಡೆದು ಸಾಧನೆ ಮಾಡಿದ್ದಾಳೆ.
ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಪುತ್ರಿ ಭಾಗ್ಯಶ್ರೀ. ತಂದೆ ಕೇಶವ ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದವರು. ಮನೆಯ ಪಕ್ಕದಲ್ಲಿ ಒಂದು ಗೂಡಂಗಡಿ ಇಟ್ಟುಕೊಂಡಿದ್ದರೆ,ಇವರ ಪತ್ನಿ ಬೀಡಿ ಕಟ್ಟುತ್ತಿದ್ದು ತನ್ಮೂಲಕ ತಮ್ಮ ಜೀವನದ ಬಂಡಿಯನ್ನು ಎಳೆಯುತ್ತಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು, ಹಿರಿಯಾಕೆ ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ.   ಎರಡನೆಯವಳು ಭಾಗ್ಯಶ್ರೀ ಹುಟ್ಟು ವಿಕಲಚೇತನೆ‌‌‌‌. ಸೊಂಟದಿಂದ  ಕೆಳಭಾಗದಲ್ಲಿ ಪೂರ್ತಿ ನಿಶಕ್ತಿ ಹೊಂದಿರುವ ಈಕೆಗೆ ಅಮ್ಮನೇ ಆಸರೆ, ಅಮ್ಮನೇ ಈಕೆಯನ್ನು ಎತ್ತಿ ತನ್ನ ಸೊಂಟದಲ್ಲಿ ಕೂರಿಸಿ ಎತ್ತಿಕೊಂಡು  ಹೋಗಿಯೇ ಅವಳನ್ನು ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಬರುತ್ತಿದ್ದರು.ಕಲಿಕೆಯಲ್ಲಿ ಆಸಕ್ತಿಯನ್ನು ಬೆಳಸಿಕೊಂಡಿದ್ದ ಭಾಗ್ಯಶ್ರೀ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಪೂರೈಸಿದ್ದಳು.  ಎಸ್.ಎಸ್.ಎಲ್.ಸಿಯಲ್ಲಿ  470 ಅಂಕಗಳನ್ನು ಪಡೆದು ಉತ್ತೀರ್ಣಳಾಗಿದ್ದಳು,  ಪಿಯುಸಿಯಲ್ಲಿ 467 ಅಂಕ ಗಳಿಸಿ ಸಾಧನೆ ಗೈದಿದ್ದಳು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss