Tuesday, July 5, 2022

Latest Posts

ಹೊಸದುರ್ಗದಲ್ಲಿ ದೇವಾಂಗ ಸಮಾಜದ ಬೃಹತ್ ಸಮಾವೇಶ : ದಯಾನಂದಪುರಿ ಸ್ವಾಮೀಜಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ದೇವಾಂಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ
ಫೆ.10 ರಂದು ಹೊಸದುರ್ಗದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಗಾಯಿತ್ರಿ ಗುರುಪೀಠದ ದಯಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಎಲ್ಲ ಸಮುದಾಯದವರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಹಾಗೂ ಮೀಸಲಾತಿ ನೀಡಲಾಗುತ್ತಿದೆ. ಆದರೆ ನೇಕಾರಿಕೆ ವೃತ್ತಿಯನ್ನು ನೆಚ್ಚಿಕೊಂಡು ಬದುಕುತ್ತಿರುವ
ದೇವಾಂಗ ಸಮಾಜಕ್ಕೆ ಯಾವುದೇ ಸರ್ಕಾರದ ಸೌಲಭ್ಯಗಳು ದೊರೆತಿಲ್ಲ. ಹಾಗಾಗಿ ಸಮಾವೇಶ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಉಂಟಾಗಿ ಅನೇಕ ನೇಕಾರರು ತೀವ್ರ ನಷ್ಟ ಅನುಭವಿಸಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡುವುದಾಗಿ ಹೇಳಿದ್ದ ಸರ್ಕಾರ ಈವರೆಗೆ ಅಂತಹ ಯಾವುದೇ ಪ್ರಯತ್ನ ಮಾಡಿಲ್ಲ. ಕಷ್ಟಪಟ್ಟು ತಯಾರಿಸಿದ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುತ್ತಿಲ್ಲ. ಇದರಿಂದಾಗಿ ದೇವಾಂಗದ ಸಮುದಾಯದ ಜನರು ಬುದುಕು ನಡೆಸುವುದು ದುಸ್ತರವಾಗಿದೆ ಎಂದು ನುಡಿದರು.
ದೇವಾಮಗ ಜನಾಂಗದ ದೇವಲಮಹರ್ಷಿ ಜಯಂತಿಯನ್ನು ಸರ್ಕಾರದ ವತಿಯಿಂದ ನಡೆಸಬೇಕು. ಬೆಂಗಳೂರು ಮತ್ತು ದೇವಾಂಗದ
ಜನರು ವಾಸಿಸುವ ಪ್ರದೇಶಗಳಲ್ಲಿ ದೇವಲ ಮಹರ್ಷಿ ಹಾಗೂ ದೇವರ ದಾಸೀಮಯ್ಯ ಅವರ ಪುತ್ಥಳಿಗಳನ್ನು ಸ್ಥಾಪಿಸಬೇಕು. ತಮಿಳುನಾಡು ಮಾದರಿಯಲ್ಲಿ ನೇಕಾರ ಕುಟುಂಬದವರಿಗೆ 100 ಯುನಿಟ್ ಉಚಿತ ವಿದ್ಯುತ್ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಮಾವೇಶದಲ್ಲಿ ಮಂಡಿದಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ದೇವಾಂಗ ಸಂಘದ ಅಧ್ಯಕ್ಷ ಡಾ.ಜಿ.ರಮೇಶ್, ನಿರ್ದೇಶಕ ಯೋಗೀಶ್, ಸಮಾಜದ ಮುಖಂಡರಾದ ಗೋ.ತಿಪ್ಪೇಶ್, ಎಚ್.ಯೋಗೀಶ್, ನಾಗೇಶಪ್ಪ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss