Saturday, August 13, 2022

Latest Posts

ಹೊಸ ಬಡಾವಣೆ ಅಭಿವೃದ್ದಿಪಡಿಸಿ, ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿ, ನಗರಾಭಿವೃದ್ದಿಗೆ ಸರ್ಕಾರ ಎಲ್ಲಾ ನೆರವು: ಬಸವರಾಜು

ಕೋಲಾರ:  ಹೊಸ ಬಡಾವಣೆಗಳ ಅಭಿವೃದ್ದಿಯೊಂದಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿ, ನಗರಗಳ ಅಭಿವೃದ್ಧಿಗೆ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ  ಬೈರತಿ ಬಸವರಾಜು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ನಗರ ಹೊರವಲಯದ ಕೆಯುಡಿಎ  ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.
ನಗರದ ಟಮಕ ಬಡಾವಣೆ ೧೯೯೫ರಲ್ಲಿ ನಿರ್ಮಾಣವಾದ  ಮೇಲೆ ಈವರೆಗೂ ಯಾವುದೇ ಬಡಾವಣೆ ಅಭಿವೃದ್ಧಿಗೊಳಿಸದಿರುವುದು ಸರಿಯಲ್ಲ. ಇಷ್ಟು ವರ್ಷ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದ ಅವರು, ಹೊಸ ಬಡಾವಣೆಗಳನ್ನು ನಿರ್ಮಿಸುವ ಮೂಲಕ ಸಂಪನ್ಮೂಲ ಕ್ರೂಢಿಕರಿಸಲು ಒತ್ತು ನೀಡಿ, ೫೦:೫೦ ಅನುಪಾತದಲ್ಲಿ ರೈತರ ಮನವೊಲಿಸಿ ಬಡಾವಣೆಗಳನ್ನು ಅಭಿವೃದ್ಧಿಗೊಳಿಸಿ ಎಂದು  ಸೂಚಿಸಿದರು.
ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಪ್ರಾಧಿಕಾರದ ಅಧ್ಯಕ್ಷರಾಗಿ ತಾವು ಅಧಿಕಾರ ವಹಿಸಿಕೊಂಡ ನಂತರ ೪ ಬಡಾವಣೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಪ್ರಾಧಿಕಾರ ವ್ಯಾಪ್ತಿಯಲ್ಲಿ ಕಮಾನುಗಳನ್ನು ನಿರ್ಮಿಸಿದರೆ  ನಗರಕ್ಕೆ ಒಂದು ಕಳೆ ಬರುತ್ತದೆ ಎಂದರು.
ಈ ಸಂಬಂಧ ಮಂಗಳವಾರ ನಡೆದ ನಗರದ ಪ್ರಮುಖರ ಸಭೆಯಲ್ಲೂ ರಿಂಗ್ ರೋಡ್ ನಿರ್ಮಾಣಕ್ಕೆ ಒತ್ತು ನೀಡಲು ಆಗ್ರಹ ವ್ಯಕ್ತವಾಗಿದೆ.  ಈಗಾಗಲೇ ೮೦.೩೭ ಕೋಟಿಗೆ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.  ಹಂತ ಹಂತವಾಗಿ ರಿಂಗ್ ರೋಡ್ ನಿರ್ಮಿಸಲು ಇಚ್ಚಿಸಿದ್ದು, ಮೊದಲ ಹಂತದಲ್ಲಿ ೬.೪೫ ಕಿಮೀ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಬಸವರಾಜು, ಸಂಪನ್ಮೂಲ ಕ್ರೂಢೀಕರಣಕ್ಕೆ , ಬಡಾವಣೆ ಅಭಿವೃದ್ಧಿಗೆ ಆದ್ಯತೆ ನೀಡಿ, ಹೊಸ ಬಡಾವಣೆ ಮಾಡಿದರೆ ಪ್ರಾಧಿಕಾರಕ್ಕೆ ಆದಾಯ ಬರುತ್ತದೆ. ಕಮಾನು ಆ ಮೇಲೆ ಮಾಡಿದರಾಯಿತು ಎಂದಾಗ ಕುಡಾ ಅಧ್ಯಕ್ಷರ ಮಾತಿಗೆ ಧ್ವನಿಗೂಡಿಸಿದ ಸಂಸದ ಮುನಿಸ್ವಾಮಿ ಸ್ವಾಗತ ಕಮಾನು ನಿರ್ಮಾಣದ ಅವಶ್ಯಕತೆಯನ್ನು ತಿಳಿಸಿದಾಗ ಸಚಿವರು ಸಮ್ಮತಿಸಿದರು.
ಯರಗೋಳು ಯೋಜನೆ ಸಂಬಂಧ ಮಾಹಿತಿ ನೀಡಿದ ಇಇ ಶ್ರೀನಿವಾಸರೆಡ್ಡಿ, ಡ್ಯಾಂ ಕಾಮಗಾರಿ ಪೂರ್ಣಗೊಂಡಿದೆ. ನೀರೆತ್ತುವ ಯಂತ್ರ, ಪವರ್‌ಸ್ಟೇಷನ್ ಕೆಲಸ ಬಾಕಿ ಇದೆ.  ನಾಲ್ಕು ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದ್ದಿದ್ದರಿಂದ ವಿಳಂಭವಾಯಿತು. ಈಗ ಬಗೆಹರಿದಿದೆ. ಶೀಘ್ರವೇ ಟ್ಯಾಂಕ್ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲಾಗುವುದು  ಎಂದು ತಿಳಿಸಿದರು.
ಮುಳಬಾಗಿಲಿನಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ನೀರು ಸರಬರಾಜಿಗೆ ಕೊರೆದಿರುವ ೧೭ ಬೋರ್‌ವೆಲ್‌ಗೆ ಪಂಪ್ ಮೋಟಾರ್ ವ್ಯವಸ್ಥೆ ಆಗಿಲ್ಲ. ಬೋರ್ಡ್ ಮೀಟಿಂಗ್ ಆದ ಮೇಲೆ ಕ್ರಮ ವಹಿಸುವುದಾಗಿ ಅಧಿಕಾರಿಗಳು ಹೇಳುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಸಚಿವರ ಗಮನಕ್ಕೆ ತಂದಾಗ  ತಕ್ಷಣ ವ್ಯವಸ್ಥೆ ಮಾಡುವಂತೆ ಬೈರತಿ ಬಸವರಾಜ್ ಅಧಿಕಾರಿಗೆ ಸೂಚಿಸಿದರು.
ನಗರದಲ್ಲಿ  ಅಮೃತ್ ಯೋಜನೆಯಡಿ ಕೈಗೊಂಡ ಕಾಮಗಾರಿಗಳು ಅಪೂರ್ಣಗೊಂಡಿದೆ,. ಸರಿಯಾಗಿ ಕೆಲಸ ಮಾಡಿಲ್ಲ, ಇತ್ತೀಚೆಗೆ ಸಂಸದರು ಕೂಡ ಭೇಟಿ ನೀಡಿ ಪರಿಶೀಲಿಸಿದ್ದರು ಎಂದು ಕುಡಾ ಅಧ್ಯಕ್ಷ ಚಲಪತಿ ಸಚಿವರ ಗಮನಕ್ಕೆ ತಂದಾಗ ಇಇ ಅವರಿಂದ ಮಾಹಿತಿ ಪಡೆದ ಬಸವವರಾಜು  ಡಿಸೆಂಬರ್ ಒಳಗೆ ಕೆಲಸ ಮುಗಿಸಿ ಎಂದು ಸೂಚಿಸಿದರು.
ಅಮೃತ ಸಿಟಿ ಯೋಜನೆಯಡಿ ೩೩ ಅರೊ ಪ್ಲಾಂಟ್  ಸ್ಥಾಪಿಸಿದ್ದರೂ  ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರುವ ಬಗ್ಗೆ ಕುಡಾ ಸದಸ್ಯ ಸತ್ಯನಾರಾಯಣರಾವ್ ಸಭೆಯ ಗಮನ ಸೆಳೆದರು.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಮಾತನಾಡಿ,ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ, ಕೆಸಿ ವ್ಯಾಲಿ ನೀರು ಅಮ್ಮೇರಹಳ್ಳಿ, ಕೋಲಾರಮ್ಮ ಕೆರೆಗೆ ಹರಿದಿದ್ದರೆ ಸಮಸ್ಯೆ ಇರುತ್ತಿರಲಿಲ್ಲ. ನೀರು ಬೇರೆ ಬೇರೆ ಕಡೆ ಹೋಗುತ್ತಿರುವುದರಿಂದ ಕೆರೆ ತುಂಬದೆ ಅಂತರ್ಜಲಮಟ್ಟ ಕುಸಿದಿದೆ, ಸಿಆರ್‌ಎಫ್ ಹಣವೂ ಸಿಗುತ್ತಿಲ್ಲ , ಬೋರ್‌ವೆಲ್ ರೀ ಚಾರ್ಜ್ ಆಗುವಷ್ಟು ಮಳೆ ಬಂದಿಲ್ಲ ಎಂದು ಸಚಿವರ ಗಮನಕ್ಕೆ ತಂದರು.
ಡಿಸಿ ಸತ್ಯಭಾಮ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಬರದ ಹಿನ್ನೆಲೆಯಲ್ಲಿ ೬ ತಿಂಗಳವರೆಗೆ ಸಿಆರ್‌ಎಫ್‌ನಿಂದ ಹಣ ನೀಡಲು  ಅವಕಾಶವಿತ್ತು. ಇದನ್ನು ವಿಸ್ತರಿಸುವಂತೆ ಕಂದಾಯ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಾಗ ಸಚಿವರ ಜತೆ ಚರ್ಚಿಸುವುದಾಗಿ ಸಚಿವ ಬಸವರಾಜು ನುಡಿದರು.
ಸಂಸದ ಮುನಿಸ್ವಾಮಿ, ಕುಡಾ ಆಯುಕ್ತ ಕೃಷ್ಣ ನಾಯಕ್, ಸದಸ್ಯರಾದ ಅಪ್ಪಿ ನಾರಾಯಣಸ್ವಾಮಿ, ಮಮತಮ್ಮ, ಯೋಜನಾ ನಿರ್ದೇಶಕ ರಂಗಸ್ವಾಮಿ, ಲೋಕೋಪಯೋಗಿ ಇಲಾಖೆ ಇಇ ಚಂದ್ರಶೇಖರ್ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss