ಮೈಸೂರು: ಬಿಜೆಪಿ ರಾಜ್ಯ ಕಾರ್ಯದರ್ಶಿಯಾದ ರಾಜೇಂದ್ರ ಅವರು ತಮ್ಮ ತ್ರೀಸ್ಟಾರ್ ಹೋಟೆಲ್ ಅನ್ನು ಕೊರೋನಾ ವೈರಸ್ ಸೋಂಕಿತರ ಸಂಪರ್ಕದಲ್ಲಿದ್ದವರ ಹೋಂ ಕ್ವಾರಂಟೈನ್ ಗಾಗಿ ಉಚಿತವಾಗಿ ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದ್ದಾರೆ.
ಮೈಸೂರು ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ವೈರಸ್ ಸೋಂಕಿತರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿದ್ದವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಹಾಗಾಗಿ ಇವರುಗಳನ್ನು ಹೋಂ ಕ್ವಾರಂಟೈನ್ ಮಾಡುವುದಕ್ಕೆ ಜಿಲ್ಲಾಡಳಿತಕ್ಕೆ ಸೂಕ್ತ ಕಟ್ಟಡಗಳ ಕೊರತೆಯ ಸಮಸ್ಯೆ ಎದುರಾಗುತ್ತಿದೆ. ಇದನ್ನು ಮನಗಂಡ ರಾಜೇಂದ್ರ ಅವರು, ಮೈಸೂರಿನ ಅಪೇರಾ ಟಾಕೀಸ್ ರಸ್ತೆಯಲ್ಲಿರುವ ತಮ್ಮ ತ್ರೀಸ್ಟಾರ್ ಐಷಾರಾಮಿ ಹೋಟೆಲ್ ಅನ್ನು ಜಿಲ್ಲಾಡಳಿತಕ್ಕೆ ಉಚಿತವಾಗಿ ಬಿಟ್ಟುಕೊಟ್ಟಿದ್ದಾರೆ. ಈ ಹೋಟೆಲ್ನಲ್ಲಿ 25 ಕೊಠಡಿಗಳಿದ್ದು, ಇದೀಗ 25 ಮಂದಿಯನ್ನು ಇಲ್ಲಿ ಹೋಂ ಕ್ವಾರಂಟೈನ್ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿದ ರಾಜ್ಯ ಹೋಟೆಲ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷರೂ ಆದ ರಾಜೇಂದ್ರ, ರಾಜ್ಯದಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಹಾಗೂ ಜನರ ಜೀವ ಉಳಿಸುವುದಕ್ಕಾಗಿ ಸರ್ಕಾರ ಹೋರಾಟ ನಡೆಸುತ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ರಕ್ಷಣೆಗಾಗಿ ಹೋಟೆಲ್ ಮಾಲೀಕರು ಮುಂದೆ ಬಂದು, ತಮ್ಮ ಹೋಟೆಲ್ ಗಳನ್ನು ಹೋಂ ಕ್ವಾರಂಟೈನ್ ಗೆ ಉಚಿತವಾಗಿ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದ್ದಾರೆ.