Wednesday, August 17, 2022

Latest Posts

ಹೋಯಿತೆಂದರೂ ಹೋಗದ ಮಹಾಮಾರಿಗೆ ಮೂಗುದಾರ ಹಾಕಲು ಆತ್ಮಸ್ಥೈರ್ಯವೇ ಅಸ್ತ್ರ!

ಹೊಸದಿಲ್ಲಿ: ೨೧ ದಿನಗಳ ಸುದೀರ್ಘ ‘ವನವಾಸ’ದೊಂದಿಗೆ ಕೋವಿಡ್‌ನಿಂದ ಮುಕ್ತಳಾದ ನಂತರ ಖುಷಿ ಖುಷಿಯಾಗಿ ಕೆಲಸಕ್ಕೆ ಹೋಗತೊಡಗಿದ್ದೆ. ಆದರೆ ಈ ಖುಷಿ ಬಹಳ ದಿನ ಉಳಿಯಲಿಲ್ಲ. ಅದೊಂದು ದಿನ ಸೆ.೮ರಂದು ಬೆಳಗ್ಗೆ ಸಣ್ಣಕ್ಕೆ ಕೆಮ್ಮು ಶುರುವಾಯಿತು. ಲೆಕ್ಕಿಸದೆ ಬ್ಯಾಂಕಿಗೆ ಕರ್ತವ್ಯಕ್ಕೆ ಹಾಜರಾದೆ. ಸಂಜೆ ಮನೆಗೆ ಮರಳಿದ ನಂತರ ಎಂದಿನಂತೆ ಸ್ನಾನ ಮುಗಿಸಿದಾಗ ಸ್ವಲ್ಪ ಜ್ವರದ ಅನುಭವವಾಯಿತು. ಟೆಂಪರೇಚರ್ ಗಮನಿಸಿದಾಗ ೯೯.೪ರಷ್ಟಿತ್ತು. ಮರುದಿನ ಮುಂಜಾನೆ ಕೆಮ್ಮು ಜೋರಾಯ್ತು, ಜ್ವರದ ಮಟ್ಟ ೧೦೦ ಡಿಗ್ರಿಗೇರಿತ್ತು. ಜತೆಗೆ ಗಂಟಲು ನೋವಿನ ಕಿರಿಕಿರಿ. ಏನನ್ನೂ ತಿನ್ನಲು ,ನುಂಗಲು, ಮಾತನಾಡಲು ಕೂಡ ಆಗುತ್ತಿರಲಿಲ್ಲ. ತಕ್ಷಣ ಜಾಗರೂಕಳಾದೆ, ಮನೆಯಲ್ಲಿ ಏಕಾಂಗಿತನ ಕಾಯ್ದುಕೊಂಡೆ. ಪುಣ್ಯಕ್ಕೆ ಮಗಳು, ಹತ್ತಿರದಲ್ಲೇ ಮತ್ತೊಂದು ವಸತಿ ನಿವೇಶನದಲ್ಲಿ ವಾಸವಿರುವ ನನ್ನ ಹೆತ್ತವರ ಜತೆಗಿದ್ದಳು. ಅದೃಷ್ಟಕ್ಕೆ ಅದೇ ದಿನ ಪರಿಸರದಲ್ಲಿ ಎನ್‌ಎಂಎಸಿ ಶಿಬಿರವಿತ್ತು. ನಾನು ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕೊಟ್ಟೆ. ಅಲ್ಲಿಂದ ಮರಳಿದ ನಂತರ ಗಂಟಲು ನೋವಿನ ಜತೆ ಮೈಗ್ರೇನ್ ಮಾದರಿ ತಲೆನೋವು, ಕಣ್ಣುನೋವು ಕೂಡ ಕಾಡಿತ್ತು. ಹಿಂದೆ ಕೋವಿಡ್ ಕಾಡಿದ್ದಾಗ ವೈದ್ಯರ ಸಲಹೆಯಂತೆ ನಿತ್ಯ ಮಾಡುತ್ತಿದ್ದ ಸ್ಟೀಮ್, ಪ್ರಾಣಾಯಾಮ, ಬಿಸಿನೀರಿಗೆ ಉಪ್ಪುಹಾಕಿ ಗಂಟಲಲ್ಲಿಟ್ಟು ಗಳಗಳ ಮಾಡುವುದು ಇತ್ಯಾದಿಗಳ ಮತ್ತೆ ಮುಂದುವರೆಸಿದೆ. ವೈದ್ಯರು ನನಗೆ ವಿಟಮಿನ್ ಮಾತ್ರೆಗಳನ್ನು ನೀಡಿದ್ದರು. ನಾನು ಪ್ರತೀ ೨ಗಂಟೆಗೊಮ್ಮೆ ನನ್ನ ಆಮ್ಲಜನಕ ಮಟ್ಟವನ್ನು ಪರಿಶೀಲಿಸುತ್ತಿದ್ದೆ.
ಅಗರಬತ್ತಿಯ ಸುವಾಸನೆ ಅನುಭವವಾಗಲೇ ಇಲ್ಲ 
ಕೊನೆಗೂ ಸೆ.೧೦ರಂದು ಗಂಟಲು ನೋವು ಕೊಂಚ ಕಡಿಮೆಯಾಯಿತು. ಸ್ವರ ದೊರಗಾಗಿದ್ದರೂ ಕೊಂಚ ಮಾತನಾಡಲು ಶಕ್ತಳಾದೆ. ಆ ದಿನ ಸ್ನಾನ ಮಾಡಿ ದೇವರ ಪೂಜೆ ಮಾಡಲು ಹೋದವಳು ಅಗರಬತ್ತಿ ಹಚ್ಚಿದರೂ ಅದರ ಸುವಾಸನೆ ಮೂಗಿಗೆ ಬಡಿಯಲೇ ಇಲ್ಲ. ಶಂಕೆಯಿಂದ ಸುಗಂಧದ್ರವ್ಯಗಳೆಲ್ಲವನ್ನು ಸಿಂಪಡಿಸಿ ವಾಸನೆ ಗ್ರಹಿಸಲು ಯತ್ನಿಸಿದೆ. ಪ್ರಯೋಜನವಾಗಲಿಲ್ಲ. ಎಷ್ಟರ ಮಟ್ಟಿಗೆ ಈ ಸಮಸ್ಯೆ ಕಾಡಿತೆಂದರೆ ಆಹಾರವು ಪಾತ್ರೆಗೆ ಅಂಟಿ ಸುಟ್ಟ ವಾಸನೆ ಬಂದರೂ , ಹಾಲು ಉಕ್ಕಿ ಚೆಲ್ಲಿದರೂ ನನಗೆ ಗೊತ್ತೇ ಆಗ್ತಿರಲಿಲ್ಲ! ಸಮಸ್ಯೆ ಶುರುವಾಗಿ ನಾಲ್ಕೈದನೇ ದಿನ ಇರಬೇಕು. ಅದೇ ದಿನ ಗಂಟಲ ಮಾದರಿ ಪರೀಕ್ಷೆಯ ಫಲಿತಾಂಶ ಬಂತು. ಕೋವಿಡ್ ಪಾಸಿಟಿವ್ ಬಂದಿತ್ತು. ವೈದ್ಯರು ಹೇಳಿದಂತೆಯೇ ಮನೆಯಲ್ಲೇ ಚಿಕಿತ್ಸಾ ಕ್ರಮಗಳನ್ನೆಲ್ಲ ಚಾಚೂ ತಪ್ಪದೆ ಪಾಲಿಸಿದೆ. ೮-೯ದಿನಗಳ ನಂತರ ಬೇನೆಗಳೆಲ್ಲವು ನಿಯಂತ್ರಣಕ್ಕೆ ಬಂತಾದರೂ ಕೆಮ್ಮು ಮಾತ್ರ ನಿಲ್ಲಲೇ ಇಲ್ಲ. ಕೆಮ್ಮುವಾಗ ಎದೆ ಭಾರವಾಗೋ ಅನುಭವ ಮುಂದುವರೆಯಿತು. ಇದಕ್ಕೂ ವೈದ್ಯರ ಸಲಹೆ ಪ್ರಕಾರ ಔಷ ಮಾಡಿದೆ. ಕೊನೆಗೂ ಸುಮಾರು ೧೪ದಿನಗಳ ನಂತರ ಈ ಅಸೌಖ್ಯವೆಲ್ಲ ನಿಂತಿತು. ಆದರೆ ದೈಹಿಕ ನಿಶ್ಶಕ್ತಿ ಮಾತ್ರ ಈಗಲೂ ಮಾಯವಾಗಿಲ್ಲ .ಇದು ಬ್ಯಾಂಕ್‌ನಲ್ಲಿ ಸಿಎ ಹುದ್ದೆಯಲ್ಲಿರುವ ಜ್ಯೋತಿ ಬಿಶ್ತ್ ಇವರ ಕೋವಿಡ್-ಕೋವಿಡ್ ನಂತರದ ಅನಾರೋಗ್ಯಗಳ ಕರಾಳ ಅನುಭವ. ನಮಗೇ ಇಷ್ಟೊಂದು ಕಾಟ ಕೊಡುವ ಕೊರೋನಾ ಹಿರಿಯರನ್ನು , ಮಕ್ಕಳನ್ನು ಅದೆಷ್ಟು ಕಾಡುತ್ತಿರಬಹುದು ಅಥವಾ ಅವರಿಗೆ ಈ ಮಹಾಮಾರಿಯನ್ನು ಸಹಿಸಲು ಖಂಡಿತ ಅಸಾಧ್ಯ. ಅವರನ್ನು ಆದಷ್ಟು ಜಾಗ್ರತೆ ಮಾಡೋದು ಬಹಳ ಮುಖ್ಯವೆಂದು ಕಾಳಜಿ ವ್ಯಕ್ತಪಡಿಸುತ್ತಾರೆ.
ಬಿಟ್ಟರೂ ಬಿಡದ ಮಹಾಮಾರಿ
ಕೊರೋನಾದಿಂದ ಮುಕ್ತರಾದ ಬಹುತೇಕ ಸಂತ್ರಸ್ತರ ದೂರು ಇದೇ ಆಗಿದೆ. ಕೊರೋನಾ ಹೋಯಿತೆಂದರೂ ಹೋಗಿರುವುದಿಲ್ಲ ಅಥವಾ ಕೊರೋನಾದಿಂದ ಮುಕ್ತರಾದಿರಿ ಎಂದು ವೈದ್ಯರು ಹೇಳಿದ ನಂತರವೂ ಕೊರೋನಾ ಉಳಿಸಿಹೋಗೋ ಆರೋಗ್ಯ ಸಮಸ್ಯೆಗಳಿಂದ ವಾರಗಟ್ಟಲೆ , ತಿಂಗಳುಗಟ್ಟಲೆ ನರಳುತ್ತಲೇ ಇರುತ್ತಾರೆ. ಕೊರೋನಾದ ಸಣ್ಣಪುಟ್ಟ ಲಕ್ಷಣವಿರುವ ರೋಗಿಗಳು ಬರೇ ಎರಡು ವಾರಗಳಲ್ಲಿ ಚೇತರಿಸುತ್ತಾರೆ ಎಂಬ ವೈದ್ಯರ ಹೇಳಿಕೆಯನ್ನು ಸುಳ್ಳಾಗಿಸುವ ತೆರ ಈ ಅಸೌಖ್ಯಗಳು ಈ ವರ್ಗದ ರೋಗಿಗಳನ್ನೇ ತಿಂಗಳುಗಟ್ಟಲೆ ಸತಾಯಿಸಿವೆ. ಇಂತಹ ಅನಾರೋಗ್ಯ ಸ್ಥಿತಿ ‘ ಪೋಸ್ಟ್ ಆಕ್ಯೂಟ್ ಕೋವಿಡ್ ಅಥವಾ ಕ್ರೋನಿಕ್ ಕೋವಿಡ್’ ಎಂದು ವೈದ್ಯರು ವಿಶ್ಲೇಷಿಸಿದ್ದಾರೆ.
ನೆನಪೂ ಇಲ್ಲ, ನರಮಂಡಲಕ್ಕೂ ಹೊಡೆತ
ಕೋವಿಡ್‌ನಿಂದ ಹೊರ ಬಂದ ನಂತರ ಕೆಲವರಿಗೆ ನೆನಪು ಶಕ್ತಿ ಇರುವುದಿಲ್ಲ, ಏಕಾಗ್ರತೆ ಇಲ್ಲ. ಏನು ಹೇಳಬೇಕು , ಏನು ಮಾಡಬೇಕು ಎಲ್ಲವೂ ಮರೆತು ಹೋಗುತ್ತೆ. ಉಸಿರಾಟ, ಜೀರ್ಣಪ್ರಕ್ರಿಯೆ, ಹೃದಯ ಬಡಿತವನ್ನು ನಿಯಂತ್ರಿಸುವಲ್ಲಿ ಪ್ರಧಾನ ಪಾತ್ರ ವಹಿಸುವ ನರಮಂಡಲದಲ್ಲಿ ಲೋಪ ಕಾಣಿಸುತ್ತದೆ, ತಿಂಗಳುಗಟ್ಟಲೆ ವಾಸನೆ, ರುಚಿ ಗೊತ್ತಾಗೋದೇ ಇಲ್ಲ. ಈ ಲೋಪವು ರೋಗಿಯ ಮಾನಸಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತೆ. ಆದರೂ ಸೂಕ್ತ ಚಿಕಿತ್ಸೆ ,ವ್ಯಾಯಾಮ, ಯೋಗ,ಧ್ಯಾನ ಮುಖೇನ ಮೊದಲಿನಂತಾಗಬಹುದು ಎಂಬುದು ತಜ್ಞರ ಲೆಕ್ಕಾಚಾರ.
ಕಾರಣ ಗೊತ್ತಿಲ್ಲ…
ಹಲವು ರೋಗಿಗಳಿಗೆ ಉಸಿರಾಟ ಸಮಸ್ಯೆ ನಿರಂತರವಾಗಿರುತ್ತೆ. ಇದಕ್ಕೆ ನಿರ್ದಿಷ್ಟ ಕಾರಣವೇನೆಂದು ಗೊತ್ತಾಗಿಲ್ಲ. ನರಮಂಡಲದಲ್ಲಿನ ಲೋಪ, ಶ್ವಾಸಕೋಶಕ್ಕಾದ ಘಾಸಿ ಅಥವಾ ಹೃದಯ ಸಂಬಂ ತೊಂದರೆಗಳು ಈ ಸಮಸ್ಯೆಗೆ ಕಾರಣವಿರಬಹುದು ಎನ್ನುವ ವೈದ್ಯರು, ಈ ತೆರ ಸಮಸ್ಯೆಯಿರುವ ರೋಗಿಗಳ ಶ್ವಾಸನಾಳಗಳನ್ನು ಸುಸ್ಥಿತಿಗೆ ತರಲು ಅಸ್ತಮಾ ಇನ್‌ಹೇಲರ್ ಜತೆ ಸರಾಗ ಉಸಿರಾಟಕ್ಕೆ ಪೂರಕವಾಗುವ ವ್ಯಾಯಾಮಗಳನ್ನು ಶಿಫಾರಸು ಮಾಡುತ್ತಾರೆ. ಇನ್ನು ಜೋರಾದ ಎದೆಬಡಿತ, ಮಿತಿಮೀರಿದ ರಕ್ತದೊತ್ತಡ ರೋಗಿಗಳನ್ನು ಕಾಡುವ ಮಗದೊಂದು ಸಮಸ್ಯೆ. ಇದಕ್ಕೂ ನರಮಂಡಲ ಮುಖ್ಯವಾಗಿ ಸ್ನಾಯುಖಂಡಗಳಲ್ಲಿನ ಲೋಪ ಕಾರಣವೆಂಬುದು ವೈದ್ಯರ ಅಂದಾಜು. ಉಸಿರಾಟದ ಸಮಸ್ಯೆ, ಎದೆನೋವು, ಅತಿಬೇ, ಸ್ನಾಯುಖಂಡ-ಸಂನೋವು ಇವು ಕೋವಿಡ್ ಮುಕ್ತರಾದ ನಂತರ ಕೆಲವು ರೋಗಿಗಳಲ್ಲಿ ಕಂಡುಬಂದಿರುವ ಲಕ್ಷಣಗಳು. ವೈದ್ಯರು ಹೇಳುವ ಔಷ, ವ್ಯಾಯಾಮಗಳ ಜತೆ ಆದಷ್ಟು ಜಾಗರೂಕತೆ ಮತ್ತು ಕೊಂಚ ಆತ್ಮಸ್ಥೈರ್ಯವನ್ನು ಮೈಗೂಡಿಸಿಕೊಂಡಲ್ಲಿ ಈ ಆರೋಗ್ಯ ಸಮಸ್ಯೆಗಳು ಅತಿಯಾಗಿ ಕಾಡವು ಎಂಬುದು ವೈದ್ಯರ ವಿಶ್ವಾಸದ ನುಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!