Wednesday, August 10, 2022

Latest Posts

ಹೌಸ್ವೈಫ್ ಶ್ರಮಕ್ಕೆ ಮನ್ನಣೆ ನೀಡೋದನ್ನು ಕಲಿಯಿರಿ: ಸುಪ್ರೀಂ ಕೋರ್ಟ್

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಹೆಂಗಸು ಮನೆಯಲ್ಲಿ ಮಾಡುವ ಕೆಲಸದ ಬೆಲೆ ಆಫೀಸಿಗೆ ಹೋಗುವ ಗಂಡನ ಕೆಲಸಕ್ಕಿಂತ ಕಡಿಮೆ ಏನಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಅವರು ದುಡಿಯುವುದಿಲ್ಲ ಅಥವಾ ಮನೆಗೆ ಆರ್ಥಿಕ ಕೊಡುಗೆ ನೀಡುವುದಿಲ್ಲ ಎಂಬ ಪರಿಕಲ್ಪನೆಯನ್ನು ತಿದ್ದಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಎನ್.ವಿ.ರಮಣ, ಎಸ್.ಅಬ್ದುಲ್ ನಜೀರ್ ಮತ್ತು ಸೂರ್ಯಕಾಂತ್ ಅವರ ನ್ಯಾಯಪೀಠವು ವಿಮಾ ಪರಿಹಾರ ಪ್ರಕರಣವೊಂದರ ತೀರ್ಪು ಪ್ರಕಟಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಸಮಯ ಮತ್ತು ಶ್ರಮವನ್ನು ಮನೆಕೆಲಸಕ್ಕೆ ಮೀಸಲಾಗಿಡುತ್ತಾರೆ. ಗೃಹಿಣಿಯರ ಚಟುವಟಿಕೆಗಳನ್ನು ಪರಿಗಣಿಸಿದಾಗ ಇದೇನು ಅಚ್ಚರಿ ಹುಟ್ಟಿಸುವುದಿಲ್ಲ.

ಗೃಹಿಣಿ ಸಾಮಾನ್ಯವಾಗಿ ಇಡೀ ಕುಟುಂಬಕ್ಕೆ ಆಹಾರವನ್ನು ಸಿದ್ಧಪಡಿಸುತ್ತಾಳೆ. ದಿನಸಿ ಮತ್ತು ಇತರ ಮನೆಯ ಶಾಪಿಂಗ್ ಅಗತ್ಯಗಳನ್ನು ನಿರ್ವಹಿಸುತ್ತಾಳೆ. ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುತ್ತಾಳೆ. ಅಲಂಕಾರ, ರಿಪೇರಿ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಾಳೆ ಮಕ್ಕಳ ಮತ್ತು ಮನೆಯ ಯಾವುದೇ ವಯಸ್ಸಾದ ಸದಸ್ಯರ ಅಗತ್ಯತೆಗಳನ್ನು ನೋಡಿಕೊಳ್ಳುತ್ತಾಳೆ. ಬಜೆಟ್ ನಿರ್ವಹಣೆ ಜತೆ ಮತ್ತಷ್ಟು ಕೆಲಸಗಳನ್ನು ಮಾಡುತ್ತಾಳೆ ಎಂದು ನ್ಯಾಯವಾದಿ ರಮಣ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಅಂಕಿಸಂಖ್ಯೆ ಕಾರ್ಯಾಲಯದ ‘ಟೈಮ್ ಯೂಸ್ ಇನ್ ಇಂಡಿಯಾ-2019’ ಎಂಬ ಶೀರ್ಷಿಕೆಯ ವರದಿಯನ್ನು ಉಲ್ಲೇಖಿಸಿ ಹೇಳಿದ ಅವರು, ವರದಿಯಲ್ಲಿ ಮಹಿಳೆಯರು ಒಂದು ದಿನಕ್ಕೆ ಸರಿಸುಮಾರು 299 ನಿಮಿಷಗಳನ್ನು ತಮ್ಮ ಕುಟುಂಬದ ಸದಸ್ಯರಿಗಾಗಿ ಸಂಬಳವಿಲ್ಲದೆ ಗೃಹಸೇವೆಗಳನ್ನು ಮಾಡಲು ವ್ಯಯಿಸುತ್ತಾರೆ, ಅದೇ ಗಂಡಸರು ಬರೀ 97 ನಿಮಿಷಗಳನ್ನು ವ್ಯಯ ಮಾಡುತ್ತಾರೆ ಎಂದು ಹೇಳಲಾಗಿದೆ.

2014ರಲ್ಲಿ ಅಪಘಾತದಲ್ಲಿ ದಂಪತಿಗಳ ಸಾವಿಗೆ ಸಂಬಂಧಿಸಿದ ಪ್ರಕರಣವನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿರುವ ವೇಳೆ ಈ ವಿಷಯ ಪ್ರಸ್ತಾಪವಾಗಿದೆ. ಈ ಪ್ರಕರಣದಲ್ಲಿ ಕುಟುಂಬಕ್ಕೆ ವಿಮಾ ಕಂಪನಿ  40.71 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಧಿಕರಣ ಆದೇಶಿಸಿತ್ತು. ಆದರೆ ಮೇಲ್ಮನವಿ ಆಲಿಸಿದ ದೆಹಲಿ ನ್ಯಾಯಾಲಯವು ಪರಿಹಾರ ಮೊತ್ತವನ್ನು 22 ಲಕ್ಷಕ್ಕೆ ಇಳಿಸಿತ್ತು. ವಿಮಾ ಕಂಪನಿಯು ಸಂತ್ರಸ್ತ ಕುಟುಂಬಕ್ಕೆ 2014ರಿಂದ ಶೇಕಡಾ 9ರಷ್ಟು ಬಡ್ಡಿ ಜತೆ 33.20 ಲಕ್ಷ ರೂ. ನೀಡುವಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು, 2 ತಿಂಗಳೊಳಗೆ ನೀಡಬೇಕು ಎಂದು ಆದೇಶಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss