ಅಯೋಧ್ಯೆಯಲ್ಲಿಂದು ಟ್ರಸ್ಟ್ ಸಭೆ; ವಿಶ್ವಸ್ಥರಿಂದ ರಾಮ ಮಂದಿರ ನಿರ್ಮಾಣ ಕಾರ್ಯ ಪರಿವೀಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾದ ನಂತರ ಮೊದಲ ಬಾರಿಗೆ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಎಲ್ಲಾ ಟ್ರಸ್ಟಿಗಳು ರಾಮ ಜನ್ಮಭೂಮಿ ಸಂಕೀರ್ಣಕ್ಕೆ ಇಂದು ಭೇಟಿ ನೀಡುತ್ತಿದ್ದಾರೆ. ಮಂದಿರ ನಿರ್ಮಾಣ ಕಾರ್ಯವನ್ನು ವೀಕ್ಷಿಸಿ, ಸಭೆಯಲ್ಲಿ ಭಾಗವಹಿಸುತ್ತಾರೆ.

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ 14 ಪ್ರಮುಖ ಸದಸ್ಯರಲ್ಲಿ 12 ಮಂದಿ ರಾಮ ಜನ್ಮಭೂಮಿ ಆವರಣದಲ್ಲಿ ಒಟ್ಟಿಗೆ ಇರುವುದು ಇದೇ ಮೊದಲು. ಈ ವೇಳೆ ಮಂದಿರ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಲಾಗುವುದು. ಬಳಿಕ ಮಧ್ಯಾಹ್ನ 3 ಗಂಟೆಯಿಂದ ಅಯೋಧ್ಯೆಯ ಸರ್ಕ್ಯೂಟ್ ಹೌಸ್‌ನಲ್ಲಿ ಟ್ರಸ್ಟ್‌ನ ನಾಲ್ಕನೇ ಸಭೆ ನಡೆಯಲಿದೆ.

ಟ್ರಸ್ಟ್‌ನ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಖಜಾಂಚಿ ಗೋವಿಂದ್ ದೇವ್ ಗಿರಿ, ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ಟ್ರಸ್ಟ್ ವಿಶ್ವಸ್ಥರಾದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸ್ವಾಮಿ ವಾಸುದೇವಾನಂದ ಸರಸ್ವತಿ, ಸ್ವಾಮಿ ಪರಮಾನಂದ ಮಹಾರಾಜ್, ಡಾ. ಅನಿಲ್ ಮಿಶ್ರಾ, ವಿಮಲೇಂದ್ರ ಮೋಹನ್ ಮಿಶ್ರಾ, ಕಾಮೇಶ್ವರ ಚೌಪಾಲ್, ನಿರ್ಮೋಹಿ ಅಖಾಡದ ಮಹಂತ್ ದಿನೇಂದ್ರ ದಾಸ್ ಹಾಗೂ ಪದನಿಮಿತ್ತ ವಿಶ್ವಸ್ಥರಾದ ಪ್ರಧಾನ ಗೃಹ ಕಾರ್ಯದರ್ಶಿ ಅವನೀಶ್ ಅವಸ್ತಿ ಮತ್ತು ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿತೀಶ್ ಕುಮಾರ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಹಾಗೂ ವಿಶ್ವಸ್ಥ ಪರಾಶರನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ.

ಸೋಮವಾರದಿಂದ ಮಂದಿರ ನಿರ್ಮಾಣ ಸಮಿತಿಯ ಎರಡು ದಿನಗಳ ಸಭೆ ನಡೆಯುತ್ತಿದೆ. ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ್ದಾರೆ. ಮಂದಿರ ನಿರ್ಮಾಣ ಪ್ರಗತಿಯ ವರದಿ ಸಿದ್ಧಪಡಿಸಿ, ಇಂದು ಟ್ರಸ್ಟ್ ಸಭೆಯಲ್ಲಿ ಮಂಡಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!