ಅಯೋಧ್ಯೆ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನ, ಜೈ ಶ್ರೀರಾಮ್‌ ಘೋಷಣೆ ಕೂಗಿ ಸಂತಸ ಪಟ್ಟ ಪ್ರಯಾಣಿಕರು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಆಗಮಿಸಿದ್ದು, ಅಯೋಧ್ಯೆ ತಲುಪುತ್ತಲೇ ಪ್ರಯಾಣಿಕರು ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಇಂಡಿಗೋ ವಿಮಾನವು ಶನಿವಾರ ಸಂಜೆ ಅಯೋಧ್ಯೆ ವಿಮಾನ ನಿಲ್ದಾಣವನ್ನು ತಲುಪಿತು. ಕರ್ನಾಟಕ ಸೇರಿ ದೇಶದ ಹಲವು ಭಾಗಗಳ ಪ್ರಯಾಣಿಕರು ವಿಮಾನ ಹತ್ತುವಾಗಲೇ ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗಿದರು. ಇನ್ನು ಅಯೋಧ್ಯೆ ತಲುಪುತ್ತಲೇ ನೂರಾರು ಪ್ರಯಾಣಿಕರು ಸಂತಸದಿಂದ ಕೆಳಗೆ ಇಳಿದರು. ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರು. ಕೆಲ ಪ್ರಯಾಣಿಕರು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಧನ್ಯವಾದ ತಿಳಿಸಿದರು.

ಪ್ರಯಾಣಿಕರನ್ನು ಸ್ವಾಗತಿಸಿದ ಪೈಲಟ್‌
ದೆಹಲಿಯಿಂದ ಇಂಡಿಗೋ ವಿಮಾನ ಹೊರಡುವ ಮುನ್ನ ಪೈಲಟ್‌ ಆಶುತೋಶ್‌ ಶೇಖರ್‌ ಅವರು ಪ್ರಯಾಣಿಕರಿಗೆ ಸ್ವಾಗತ ಕೋರಿದರು. ‘ಇಂತಹ ಮಹತ್ವದ ಪ್ರಯಾಣದ ಸಂದರ್ಭದಲ್ಲಿ ವಿಮಾನದ ಪೈಲಟ್‌ ಆಗಿ ಇಂಡಿಗೋ ನನ್ನನ್ನು ನಿಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ನಿಮ್ಮೆಲ್ಲರನ್ನೂ ಕರೆದೊಯ್ಯುವ ಖುಷಿ ನಮ್ಮದಾಗಿದೆ. ಸುಖಕರ ಪ್ರಯಾಣ ನಮ್ಮದಾಗಲಿದೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

ಬೆಂಗಳೂರಿನಿಂದಲೂ ಇದೆ ವಿಮಾನ
ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಆರಂಭವಾಗುತ್ತಿದ್ದಂತೆಯೇ ದೇಶದ ಬೇರೆ ಬೇರೆ ಭಾಗಗಳಿಂದ ನೇರ ವಿಮಾನ ಯಾನ ಆರಂಭವಾಗಲಿದೆ. ಹಾಗೆ ವಿಮಾನ ಯಾನ ಆರಂಭವಾಗುವ ಸ್ಥಳಗಳಲ್ಲಿ ಬೆಂಗಳೂರು ಕೂಡಾ ಒಂದು. ಜನವರಿ 17ರಂದು ಅಯೋಧ್ಯೆಗೆ ಬೆಂಗಳೂರು ಮತ್ತು ಕೋಲ್ಕೊತಾದಿಂದ ನೇರ ವಿಮಾನ ಯಾನ ಆರಂಭವಾಗಲಿದೆ ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಪ್ರಕಟಿಸಿದೆ.

ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆಯ ಜತೆಗೆ ಅಯೋಧ್ಯೆ ಮತ್ತು ದೆಹಲಿ ನಡುವೆ ತನ್ನ ಉದ್ಘಾಟನಾ ವಿಮಾನಗಳು ಓಡಾಡಲಿವೆ. ಮುಂದೆ ಹಂತ ಹಂತವಾಗಿ ಬೇರೆ ಬೇರೆ ನಗರಗಳಿಂದ ಅಯೋಧ್ಯೆಗೆ ನೇರ ಸಂಪರ್ಕ ದೊರೆಯಲಿದೆ.

ಸಮಯ-ವೇಳಾಪಟ್ಟಿ
ಬೆಂಗಳೂರು-ಅಯೋಧ್ಯೆ ಮಾರ್ಗದಲ್ಲಿ ಮೊದಲ ವಿಮಾನವು ಜನವರಿ 17 ರ ಬೆಳಿಗ್ಗೆ 8.05 ಕ್ಕೆ ಹೊರಟು 10.35 ಕ್ಕೆ ಅಯೋಧ್ಯೆಯನ್ನು ತಲುಪಲಿದೆ. ಅದೇ ರೀತಿ ಹಿಂತಿರುಗುವ ವಿಮಾನವು ಅಯೋಧ್ಯೆಯಿಂದ ಮಧ್ಯಾಹ್ನ 3.40 ಕ್ಕೆ ಹೊರಡಲಿದ್ದು, ಸಂಜೆ 6.10 ಕ್ಕೆ ಬೆಂಗಳೂರಿಗೆ ತಲುಪಲಿದೆ. ಅಯೋಧ್ಯೆ-ಕೋಲ್ಕತ್ತಾ ಮಾರ್ಗದಲ್ಲಿ, ವಿಮಾನವು ಅಯೋಧ್ಯೆಯಿಂದ ಬೆಳಿಗ್ಗೆ 11.05 ಕ್ಕೆ ಟೇಕ್ ಆಫ್ ಆಗಲಿದೆ. ಮಧ್ಯಾಹ್ನ 12.50 ಕ್ಕೆ ಕೋಲ್ಕತ್ತಾದಲ್ಲಿ ಇಳಿಯಲಿದೆ. ಕೋಲ್ಕತ್ತಾ-ಅಯೋಧ್ಯೆ ವಿಮಾನವು ಕೋಲ್ಕತ್ತಾದಿಂದ ಮಧ್ಯಾಹ್ನ 1:25ಕ್ಕೆ ಹೊರಡಲಿದ್ದು, ಮಧ್ಯಾಹ್ನ 3.10ಕ್ಕೆ ಅಯೋಧ್ಯೆಯನ್ನು ತಲುಪಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!