ಕಾರ್ಮಿಕ ಇಲಾಖೆಯಿಂದ 78 ಲಕ್ಷಕ್ಕೂ ಅಧಿಕ ಕಾರ್ಮಿಕರ ಕುಟುಂಬಕ್ಕೆ ಆರೋಗ್ಯ ರಕ್ಷಣೆ: ಸಚಿವ ಶಿವರಾಮ್ ಹೆಬ್ಬಾರ್

ಹೊಸದಿಗಂತ ವರದಿ,ಹಾವೇರಿ:

ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಿಂದ ೭೮ ಲಕ್ಷಕ್ಕೂ ಅಧಿಕ ಕಾರ್ಮಿಕರು ಮತ್ತು ಅವರ ಕುಟುಂಬಕ್ಕೆ ಆರೋಗ್ಯ ರಕ್ಷಣೆಯನ್ನು ಕೊಡಲಾಗುತ್ತಿದೆ. ರಾಜ್ಯ ಕಾರ್ಮಿಕ ಇಲಾಖೆ ದೇಶದಲ್ಲಿನೇ ಕ್ರಾಂತಿಕಾರಕ ಬದಲಾವಣೆಯನ್ನು ನೀಡಿರುವುದು ಹೆಮ್ಮೆಯ ಸಂಗತಿ ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಮ ಹೆಬ್ಬಾರ್ ತಿಳಿಸಿದರು.
ಜಿಲ್ಲೆಯ ರಾಣೇಬೆನ್ನೂರ ನಗರದಲ್ಲಿ ನೂತನ ಇಎಸ್‌ಐ ಚಿಕಿತ್ಸಾಲಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಪ್ರಾರಂಭವಾದಾಗಿನಿಂದ ಅಂದರೆ ಕಳೆದ ಮೂರು ವರ್ಷಗಳ ಹಿಂದಿನವರೆಗೆ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಿಷ್ಯವೇತನವಾಗಿ ೩೯೧ ಕೋಟಿ ನೀಡಲಾಗಿತ್ತು. ಆದರೆ, ಕಳೆದ ಎರಡೇ ವರ್ಷಗಳ ಅವಧಿಯಲ್ಲಿ ೮೪೫ ಕೋಟಿ ರೂಗಳ ಶಿಷ್ಯವೇತನವನ್ನು ನೀಡುವ ಮೂಲಕ ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೆ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಪರೀಕ್ಷಾ ಪ್ರಾಧಿಕಾರದ ಮೂಲಕ ಅರ್ಜಿಯನ್ನು ಕರೆದು ೭೫೦ ಕಾರ್ಮಿಕರ ಮಕ್ಕಳಿಗೆ ೫೫೦ ಮಕ್ಕಳಿಗೆ ಕೆಎಎಸ್ ಮತ್ತು ೭೫೦ ಮಕ್ಕಳಿಗೆ ತರಬೇತಿಯನ್ನು ಕೊಡಿಸುವ ಕೆಲಸವನ್ನು ಮಾಡಲಾಗಿದೆ. ಇದರೊಂದಿಗೆ ೬ ಸಾವಿರ ಶಿಷ್ಯವೇತನವನ್ನು ನೀಡುವ ಮೂಲಕ ಕಾರ್ಮಿಕರಿಗೆ ಹೊರೆಯಾಗದಂತೆ ಮಾಡಲಾಗಿದೆ. ಪ್ರತಿ ಜಿಲ್ಲೆಯಿಂದ ಒಂದು ಹಾಗೂ ಬೆಂಗಳೂರಿನಲ್ಲಿನ ೫ ಕಾರ್ಮಿಕ ಮಕ್ಕಳಿಗೆ ೩೫ ಲಕ್ಷ ವೆಚ್ಚದಲ್ಲಿ ಪೈಲಟ್ ತರಬೇತಿಯನ್ನು ಕೊಡಿಸಲಾಗುತ್ತಿದೆ ಎಂದು ತಿಳಿಸಿದರು.
ದೇಶವನ್ನು ಕಾಯುವ ಸೈನಿಕ, ದೇಶಕ್ಕೆ ಅನ್ನ ನೀಡುವ ರೈತ ಮತ್ತು ತನ್ನ ಬೆವರಿನಿಂದ ದೇಶವನ್ನು ಕಟ್ಟುವ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ನಾವೆಂದೂ ಮರೆಯಬಾರದು. ಕೋಟ್ಯಾಂತರ ರೂಗಳ ಯೋಜನೆಯನ್ನು ರೂಪಿಸಬಹುದು, ಅದಕ್ಕೆ ಬೇಕಾದ ಅನುದಾನವನ್ನು ತರಬಹುದು ಆದರೆ ಆ ಯೋಜನೆ ಸಿದ್ದವಾಗಬೇಕಾದರೆ ಕಾರ್ಮಿಕನ ಶ್ರಮದಿಂದ ಮಾತ್ರಸಾಧ್ಯ ಈಗಾಗಿ ಕಾರ್ಮಿಕ ಮತ್ತು ಅವನ ಕುಟುಂಬ ಸಾಮಾಜಿಕವಾಗಿ ಸಮಾನತೆಯನ್ನು ಕಾಣಬೇಕೆಂದು ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ೨.೦೬ ಕೋಟಿ ಕಾರ್ಮಿಕರಿದ್ದರೆ ಇವರಲ್ಲಿ ೧.೪೬ ಕೋಟಿ ಕಾರ್ಮಿಕರು ಇ-ಶ್ರಮ ಪೋರ್ಟ್‌ದಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಬೆಂಗಳೂರೊಂದರಲ್ಲಿನೇ ೭.೪೬ ಲಕ್ಷ ಮಹಿಳಾ ಕಟ್ಟಡ ಕಾರ್ಮಿಕರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ೫ ಸಾವಿರದಂತೆ ೧೨೫೬ ಕೋಟಿ ಮತ್ತು ೩ ಸಾವಿರದಂತೆ ೬೯೧ ಕೋಟಿ ರೂಗಳನ್ನು ಕಾರ್ಮಿಕರ ಖಾತೆಗೆ ಜಮೆ ಮಾಡುವ ಮೂಲಕ ಕಷ್ಟದ ಸಂದರ್ಭದಲ್ಲಿ ಸರ್ಕಾರ ಕಾರ್ಮಿಕರ ಹಿತ ಕಾಯುವ ಕೆಲಸವನ್ನು ಮಾಡಿತು. ಕಟ್ಟಡ ಕಾರ್ಮಿಕರ ಮಕ್ಕಳು ಉನ್ನತ ವೈಆಸಂಗವನ್ನು ಮಾಡುವುದಕ್ಕೆ ಬೇಕಾದ ವೆಚ್ಚವನ್ನು ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಭರಿಸುತ್ತಿದೆ ಎಂದರು.
ಶಾಸಕ ಅರುಣಕುಮಾರ ಗುತ್ತೂರ ಮಾತನಾಡಿದರು. ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ಆರ್.ಶಂಕರ, ಭಾರತಿ ಜಂಬಗಿ, ಡಾ. ರವಿಕುಮಾರ, ಆರ್.ಆರ್.ರಾಮಲಿಂಗಣ್ಣನವರ, ಶಿವಕುಮಾರ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!