ಕೊಡಗಿನಲ್ಲಿ ಮುಂದುವರಿದ ವರುಣಾರ್ಭಟ: ಗುರುವಾರವೂ ಶಾಲಾ ಕಾಲೇಜುಗಳಿಗೆ ರಜೆ

ಹೊಸದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ.ಗುರುವಾರವೂ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಗುರುವಾರವೂ ಜಿಲ್ಲೆಯ ಎಲ್ಲಾ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ಆದೇಶ ಹೊರಡಿಸಿದ್ದಾರೆ.
ಭಾರೀ ಗಾಳಿ ಮಳೆಗೆ ಜಿಲ್ಲೆಯ ಹಲವೆಡೆ ಮರಗಳು ಉರುಳಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದಿದ್ದು, ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದೆ.
ಮನೆಗೆ ಹಾನಿ:
ಕೊಡ್ಲಿಪೇಟೆ ಹೋಬಳಿಯ ಶಿವರಳ್ಳಿ ಗ್ರಾಮದಲ್ಲಿ ಮಳೆಯಿಂದಾಗಿ ಸುಶೀಲಾ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಸಮೀಪ ಅಲ್ಪ ಪ್ರಮಾಣದ ಬರೆ ಕುಸಿತವಾಗಿದ್ದು, ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ತಹಶೀಲ್ದಾರ್ ಪಿ.ಎಸ್.ಮಹೇಶ್ ಅವರು ತಿಳಿಸಿದ್ದಾರೆ.
ಭಾಗಮಂಡಲದಲ್ಲಿ 143 ಮಿ.ಮೀ. ಮಳೆ: ಕೊಡಗು ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 68.01 ಮಿ.ಮೀ. ಮಳೆಯಾಗಿದೆ.
ಭಾಗಮಂಡಲದಲ್ಲಿ ಅತೀ ಹೆಚ್ಚು ಅಂದರೆ 143.40 ಮಿ.ಮೀ.ಮಳೆ ದಾಖಲಾಗಿದೆ.
ಉಳಿದಂತೆ ಜಿಲ್ಲೆಯಲ್ಲಿ ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 75.40, ನಾಪೋಕ್ಲು 67.80, ಸಂಪಾಜೆ 106.50, ವೀರಾಜಪೇಟೆ ಕಸಬಾ 58, ಹುದಿಕೇರಿ 70.80, ಶ್ರೀಮಂಗಲ 57.60, ಪೊನ್ನಂಪೇಟೆ 38, ಅಮ್ಮತ್ತಿ 50, ಬಾಳೆಲೆ 18, ಸೋಮವಾರಪೇಟೆ ಕಸಬಾ 45, ಶನಿವಾರಸಂತೆ 43.60, ಶಾಂತಳ್ಳಿ 132, ಕೊಡ್ಲಿಪೇಟೆ 52.60, ಕುಶಾಲನಗರ 16, ಸುಂಟಿಕೊಪ್ಪ 53 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ 98.28 ಮಿ.ಮೀ.ವೀರಾಜಪೇಟೆ ತಾಲೂಕಿನಲ್ಲಿ 48.73 ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 57.03 ಮಿ.ಮೀ. ಮಳೆಯಾಗಿದ್ದು, ವರ್ಷಾರಂಭದಿಂದ ಇದುವರೆಗೆ ಜಿಲ್ಲೆಯಲ್ಲಿ 1024.84 ಮಿ.ಮೀ. ಮಳೆಯಾದಂತಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 951.56 ಮಿ.ಮೀ ಮಳೆಯಾಗಿತ್ತು.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಬುಧವಾರ ನೀರನ ಮಟ್ಟವನ್ನು 2854.54 ಅಡಿಗಳಿಗೆ ಕಾಯ್ದಿರಿಸಿಕೊಂಡು ನದಿಗೆ 11,940 ಹಾಗೂ ನಾಲೆಗೆ 20ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 2842.44 ಅಡಿಗಳಷ್ಟಿತ್ತು.
ಪ್ರಸಕ್ತ ಜಲಾಶಯಕ್ಕೆ 12,644 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಕಳೆದ ವರ್ಷ ಇದೇ ದಿನಾಂಕದಂದು ನೀರಿನ ಒಳಹರಿವು 375 ಕ್ಯುಸೆಕ್’ನಷ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!