ನಾಳೆ ಭಾರತಕ್ಕೆ ಐತಿಹಾಸಿಕ ಸಹಸ್ರ ಪಂದ್ಯ: ರೋಹಿತ್ ಜೊತೆ ಇಶಾನ್ ಕಿಶನ್ ಓಪನಿಂಗ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಮತ್ತು ವೆಸ್ಟಿಂಡೀಸ್ ನಡುವಿನ ಏಕದಿನ ಸರಣಿಗೆವೇದಿಕೆ ಸಜ್ಜಾಗಿದ್ದು, ನಾಳೆ ಮೊದಲ ಪಂದ್ಯವು ನಡೆಯಲಿದೆ.
ಇತ್ತ ಭಾರತಕ್ಕೆ ನಾಳೆ ಐತಿಹಾಸಿಕ ಕ್ಷಣವಾಗಿದ್ದು, ಒಂದೆಡೆ ಭಾರತವು ನಾಳೆ ಆಡುತ್ತಿರುವುದು ಸಾವಿರದ ಏಕದಿನ ಪಂದ್ಯವಾಗಿದೆ. ಮತ್ತೊಂದೆಡೆ ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕನಾಗಿ ಹೊಣೆಗಾರಿಕೆ ವಹಿಸಿಕೊಂಡಿರುವ ಮೊದಲ ಪಂದ್ಯವಾಗಿದೆ.
ದ.ಆಫ್ರಿಕಾ ಸರಣಿಗೆ ರೋಹಿತ್ ನಾಯಕನಾಗಿ ಆಯ್ಕೆಯಾಗಿದ್ದರೂ ಗಾಯದಿಂದಾಗಿ ಅವರಿಗೆ ಹೋಗಲು ಸಾಧ್ಯವಾಗಿರಲಿಲ್ಲ.ಇದೀಗ ಭಾರತವು ಹೊಸದಾಗಿ ಗೆಲುವಿನೊಂದಿಗೆ ಈ ವರ್ಷದ ಕ್ರಿಕೆಟ್ ಋತುವನ್ನು ಆರಂಭಿಸುವ ಉಮೇದಿನಲ್ಲಿದೆ.
ಆರಂಭಿಕನಾಗಿ ರೋಹಿತ್ ಜೊತೆ ಇಶಾನ್ ಕಿಶನ್
ಭಾರತದ ಪ್ರಮುಖ ಆಟಗಾರರಿಗೆ ಕೋವಿಡ್ ತಗಲಿದ್ದರಿಂದಾಗಿ ತಂಡದ ಸರದಿಯಲ್ಲಿ ತುಸು ಬದಲಾವಣೆ ಮಾಡಬೇಕಾದ ಅನಿವಾರ್ಯತೆಯೊದಗಿದೆ. ಶಿಖರ್ ಧವನ್ ಮತ್ತು ಋತುರಾಜ್ ಗಾಯಕ್‌ವಾಡ್ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಆರಂಭಿಕನಾಗಿ ಬರುವರು ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ. ಇಶಾನ್ ಕಿಶನ್ ಏಕದಿನ ತಂಡಕ್ಕೆ ಸೇರ್ಪಡೆಯಾಗಿರಲಿಲ್ಲ. ಮೂವರು ಆಟಗಾರರು ಕೋವಿಡ್ ತಗಲಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಂಡಕ್ಕೆ ಸೇರಿಸಲಾಗಿತ್ತು.
ಮಯಾಂಕ್ ಅಗರ್‌ವಾಲ್ ತಂಡದಲ್ಲಿದ್ದರೂ ಅವರು ಕೂಡ ಕೆಲವು ದಿನಗಳ ಕ್ವಾರಂಟೈನ್ ಅವಧಿ ಪೂರೈಸಬೇಕಾಗಿರುವುದರಿಂದ ಇಶಾನ್ ಒಬ್ಬರೇ ಆರಂಭಿಕರಾಗಿ ಇರುವುದು ಎಂದು ರೋಹಿತ್ ಹೇಳಿದ್ದಾರೆ.
ಭಾರತಕ್ಕೆ ಸಹಸ್ರ ಪಂದ್ಯ
ಭಾರತವು ಇಂದು ಆಡುತ್ತಿರುವುದು ಸಾವಿರದ ಏಕದಿನ ಪಂದ್ಯವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಸಾವಿರದ ಪಂದ್ಯವಾಡುತ್ತಿರುವ ಪ್ರಥಮ ತಂಡವಾಗಿದೆ ಭಾರತ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಧ್ಯೆ ವಿಂಡೀಸ್ ವಿರುದ್ಧ ಭಾರತದ ನೆಲದಲ್ಲಿ ಅತಿ ಹೆಚ್ಚು ರನ್‌ದಾರರು ಯಾರೆಂಬ ನಿಟ್ಟಿನಲ್ಲೂ ಪೈಪೋಟಿ ನಡೆಯಲಿದೆ. ಪ್ರಸ್ತುತ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ 20 ಪಂದ್ಯಗಳಿಂದ 1239  ರನ್ ಗಳಿಸಿ (5 ಶತಕ) ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ 16 ಪಂದ್ಯಗಳಿಂದ 1040ರನ್ ಗಳಿಸಿ (3 ಶತಕ)ದ್ವಿತೀಯ ಸ್ಥಾನದಲ್ಲಿದ್ದಾರೆ. 3 ಪಂದ್ಯಗಳ ಸರಣಿ ಮುಗಿಯುವ ವೇಳೆಗೆ ಯಾರು ಮುಂದಿರುತ್ತಾರೆ ಎಂದು ಕಾದು ನೋಡಬೇಕು. ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧ ಒಟ್ಟಾರೆ 2235 ಏಕದಿನ ರನ್ ಗಳಿಸಿ ಎಲ್ಲರಿಗಿಂತ ಮುಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!