ಪ್ಲಾಂಟೇಶನ್‌ನಿಂದ ಮರ ಕಳವು: ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ಶಿವಮೊಗ್ಗ:

ಎಂಪಿಎಂ ಅರಣ್ಯ ಇಲಾಖೆಗೆ ಸೇರಿದ ನೀಲಗಿರಿ ಹಾಗೂ ಅಕೇಶಿಯ ಪ್ಲಾಂಟೇಶನ್‌ನಿಂದ ಮರ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿ, ಬಂಧಿತರಿಂದ 1.50 ಲಕ್ಷ ರೂ. ಮೌಲ್ಯದ 30 ಮೆಟ್ರಿಕ್ ಟನ್ ಅಕೇಶಿಯಾ ಮತ್ತು ನೀಲಗಿರಿ ಮರದ ತುಂಡು, ಮರ ಸಾಗಾಣಿಕೆಗೆ ಬಳಿಸಿದ್ದ 52 ಲಕ್ಷ ರೂ. ಮೌಲ್ಯದ 2 ಲಾರಿ ಮತ್ತು ಕೃತ್ಯಕ್ಕೆ ಬಳಸಿದ 4 ಲಕ್ಷ ರೂ. ಮೌಲ್ಯದ ಒಂದು ಆಲ್ಟೋ ಕಾರು ಸಹಿತ ಒಟ್ಟು 57.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಮೇ 16ರಂದು ಕರೂರು ಹೋಬಳಿ ನಾಡಕಿರುವಾಸೆ ಗ್ರಾಮದ ಎಂಪಿಎಂ ನಡುತೋಪಿನಲ್ಲಿ ಅಕೇಶಿಯಾ ಮತ್ತು ನೀಲಗಿರಿ ಮರಗಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿರುವ ಸಂಬಂಧ ಸಹಾಯಕ ಅರಣ್ಯಾಧಿಕಾರಿ ಪಾಸ್ಕಲ್ ರೋಡ್ರಿಗಸ್ ಕಾರ್ಗಲ್ ಠಾಣೆಗೆ ದೂರು ನೀಡಿದ್ದರು. ನಾಡಕಿರುವಾಸೆ ಗ್ರಾಮದ ಎಂಪಿಎಂ ನಡುತೋಪಿನಲ್ಲಿ ಮರ ಕಟಾವು ಮಾಡಲು ಅಬ್ದುಲ್ ರೆಹಮಾನ್ ಎಂಬುವವರಿಗೆ ಗುತ್ತಿಗೆ ನೀಡಲಾಗಿತ್ತು. ಅಬ್ದುಲ್ ರೆಹಮಾನ್ ಅವರು ಫೆ. 7ರಿಂದ ಮೇ 9ರವರೆಗೆ ಮರ ಕಡಿತಲೆ ಮಾಡಿ ಸಾಗಾಣಿಕೆ ಮಾಡಿದ್ದರು. ನಂತರ ಅಕಾಲಿಕ ಮಳೆ ಬಂದಿದ್ದರಿಂದ ಮರ ಕಡಿತಲೆ ಮಾಡುವುದನ್ನು ನಿಲ್ಲಿಸಿದ್ದರು. ಮೇ 15ರಂದು ನಡುತೋಪು ಕಾವಲು ಕಾಯುತ್ತಿದ್ದ ಮಂಜುನಾಥ್ ಎಂಬಾತ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗೊತ್ತಾಗದಂತೆ ಅಕ್ರಮವಾಗಿ 1.50 ಲಕ್ಷ ರೂ. ಮೌಲ್ಯದ ಮರಗಳನ್ನು ಎರಡು ಲಾರಿಗಳಲ್ಲಿ ಸಾಗಾಣಿಕೆ ಮಾಡಿದ್ದ. ಕಾರ್ಯಾಚರಣೆ ನಡೆಸಿ ಆರೋಪಿ ಮಂಜುನಾಥ್ ಅವರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ನೀಡಿದ ಮಾಹಿತಿ ಮೇರೆಗೆ ದಾಂಡೇಲಿಯ ವೆಸ್ಟ್‌ಕೋರ್ಸ್ ಪೇಪರ್ ಮಿಲ್ ಆವರಣದಲ್ಲಿದ್ದ ಎರಡು ಲಾರಿಗಳನ್ನು ವಶಕ್ಕೆ ಪಡೆದು 14 ಮೆಟ್ರಿಕ್ ಟನ್ ಅಕೇಶಿಯಾ ಮತ್ತು 16 ಮೆಟ್ರಿಕ್ ಟನ್ ನೀಲಗಿರಿ ಮರಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!