ಯುವ ಸಮೂಹಕ್ಕೆ ಮಾರಕ: PUBG, TikTok ಆಪ್‌ ಗಳ ನಿಷೇಧಕ್ಕೆ ಮುಂದಾದ ತಾಲಿಬಾನ್ ಸರಕಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ತಾಲಿಬಾನಿಗಳ ಅಫ್ಘಾನಿಸ್ತಾನ ಸರ್ಕಾರ PUBG ಮತ್ತು TikTok ಆಪ್‌ಗಳನ್ನು ನಿಷೇಧಿಸಲು ನಿರ್ಧರಿಸಿದೆ. ಈ ಆಪ್‌ಗಳಿಂದ ಯುವ ಸಮೂಹ ಹಾಳಾಗುತ್ತದೆ ಎಂಬುದೇ ಅಫ್ಘಾನಿಸ್ತಾನ ಸರ್ಕಾರದ ಕಾರಣ.

ಮೂರು ತಿಂಗಳೊಳಗೆ ಎರಡೂ ಆಪ್‌ಗಳನ್ನು ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಏಷಿಯನ್‌ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ. ಈ ಹಿಂದೆ ಏಪ್ರಿಲ್‌ನಲ್ಲಿಯೇ ಆಪ್‌ ನಿಷೇಧದ ಬಗ್ಗೆ ಅಫ್ಘಾನಿಸ್ತಾನ ಸರ್ಕಾರ ಪ್ರಸ್ತಾಪ ಮಾಡಿತ್ತು.

ತಾಲೀಬಾನ್‌ ವಕ್ತಾರ ಇನಾಮುಲ್ಲಾ ಸಮಂಗನಿ ಈ ಸಂಬಂಧ ಹೇಳಿಕೆ ನೀಡಿದ್ದು “ಯುವ ಸಮುದಾಯ ಹಾದಿ ತಪ್ಪದಂತೆ ತಡೆಯಲು ಟಿಕ್‌ಟಾಕ್‌ ಮತ್ತು ಪಬ್‌ಜಿ ನಿಷೇಧಿಸುವುದು ಅನಿವಾರ್ಯ,” ಎಂದಿದ್ದಾರೆ.

ಟೆಲೆಕಮ್ಯುನಿಕೇಷನ್‌ ಇಲಾಖೆಯ ಸಭೆಯಲ್ಲಿ ನಿಷೇಧದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ರಕ್ಷಣಾ ಇಲಾಖೆ ಮತ್ತು ಷರಿಯತ್‌ ಕಾನೂನು ಜಾರಿ ನಿರ್ವಹಣಾಲಯದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಣಯಕ್ಕೆ ತಳೆಯಲಾಗಿದೆ.

ಇತ್ತೀಚೆಗಷ್ಟೇ ಒಟ್ಟಾರೆ 23 ಮಿಲಿಯನ್‌ ವೆಬ್‌ಸೈಟ್‌ಗಳನ್ನು ಅಫ್ಘಾನಿಸ್ತಾನ ಸರ್ಕಾರ ನಿಷೇಧಿಸಿತ್ತು. ಇದರಲ್ಲಿನ ಕಂಟೆಂಟ್‌ ಅನೈತಿಕ ಎಂದು ತಾಲೀಬಾನ್‌ ಕರೆದಿತ್ತು. ಇನ್ನು 90 ದಿನಗಳೊಳಗೆ ಪಬ್‌ ಜಿ ಮತ್ತು ಟಿಕ್‌ ಟಾಕ್‌ ಸಂಪೂರ್ಣವಾಗಿ ನಿಷೇಧವಾಗಲಿದೆ.
ತಾಲೀಬಾನ್‌ ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರ ಹಿಡಿದ ನಂತರ ಮನರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗುತ್ತಿದೆ. ಸಂಗೀತ, ಸಿನೆಮಾ, ದಾರವಾಹಿಗಳು ಅಫ್ಘಾನಿಸ್ತಾನದಲ್ಲಿ ನಿಷೇಧಗೊಂಡಿವೆ. ಮಾಧ್ಯಮ ಸ್ವಾತಂತ್ರ್ಯವೂ ಅಫ್ಘಾನಿಸ್ತಾನದಲ್ಲಿ ಇಲ್ಲ. ಕಟ್ಟರ್‌ ಇಸ್ಲಾಂ ವಾದವನ್ನು ತಾಲೀಬಾನಿಗರು ಪಾಲಿಸುತ್ತಿದ್ದು, ಸ್ವಚ್ಚಂದದ ಸ್ವತಂತ್ರ ದೇಶದ ಕನಸು ಅಫ್ಘಾನಿಸ್ತಾನೀಯರಿಗೆ ಮರೀಚಿಕೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!