ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು: ಎಸ್ಪಿಗೆ 1 ಕೋಟಿ ರೂ. ದಂಡ, 4 ವರ್ಷ ಜೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬೆಂಗಳೂರು: ಯಲಹಂಕ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯ ಎಸ್ಪಿ ಶ್ರೀನಿವಾಸ ಐಯ್ಯರ್ ಅಕ್ರಮ ಆಸ್ತಿ ಹೊಂದಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಒಂದು ಕೋಟಿ ರೂ. ದಂಡ ಹಾಗೂ 4 ವರ್ಷ ಸಾದಾ ಸಜೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಆರೋಪಿ ಶ್ರೀನಿವಾಸ ಐಯ್ಯರ್ ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಅಕ್ರಮ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರನ್ವಯ 2007ರ ನವೆಂಬರ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಐಯ್ಯರ್ ಮನೆ ಶೋಧನೆ ನಡೆಸಿದಾಗ, ತಮ್ಮ ಬಲ್ಲ ಮೂಲಗಳ ಆದಾಯಕ್ಕಿಂತ 40,60,324 ರೂ. ಅಂದರೆ ಶೇ.53.58 ರಷ್ಟು ಅಕ್ರಮ ಆಸ್ತಿ ಹೊಂದಿರುವುದು ದೃಢಪಟ್ಟಿತ್ತು. ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದು, ಅದು ವಿಚಾರಣೆಗೆ ದಾಖಲಾಗಿತ್ತು.

ವಿಚಾರಣೆ ಪೂರ್ಣಗೊಳಿಸಿದ ಬೆಂಗಳೂರಿನ 77ನೇ ಸಿಟಿ – ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು ಮತ್ತು ವಿಶೇಷ ನ್ಯಾಯಾಧೀಶರಾದ ಎಸ್.ವಿ. ಶ್ರೀಕಾಂತ್, ಆರೋಪಿಗೆ 4 ವರ್ಷ ಸಾದಾ ಸಜೆ ಮತ್ತು ಒಂದು ಕೋಟಿ ರೂ. ದಂಡ ವಿಧಿಸಿದ್ದು, ದಂಡ ಪಾವತಿಸಲು ತಪ್ಪಿದ್ದಲ್ಲಿ ಹೆಚ್ಚುವರಿ 2ವರ್ಷ ಸಾದಾ ಸಜೆ ಅನುಭವಿಸಬೇಕೆಂದು ತೀರ್ಪಿನಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!