ಸ್ಪಷ್ಟ ಮಾಹಿತಿಯಿಲ್ಲದೆ ಹೇಳಿಕೆ ಕೊಡಬೇಡಿ- ಗೃಹಸಚಿವರ ವಿರುದ್ಧ ಕುಮಾರಸ್ವಾಮಿ ಅಸಮಾಧಾನ

ಹೊಸದಿಗಂತ ವರದಿ, ಮೈಸೂರು
ಬೆಂಗಳೂರಿನಲ್ಲಿ ಉರ್ದು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಯುವಕನ ಕೊಲೆಯಾಗಿದೆ ಎಂಬ ಹೇಳಿಕೆ ನೀಡಿದ್ದ ಗೇಹಸಚಿವರು ಈಗ ಮಾತು ಬದಲಿಸಿದ್ದಾರೆ. ಯಾವುದೇ ಹೇಳಿಕೆ ನೀಡುವ ಮುನ್ನ ಸಚಿವರು ಸೂಕ್ತವಾದ ಮಾಹಿತಿ ಪಡೆದೇ ಹೇಳಿಕೆ ನೀಡಬೇಕು. ಪದೇ ಪದೇ ತಮ್ಮ ಹೇಳಿಕೆಗಳನ್ನು ಬದಲಾಯಿಸಬೇಡಿ ಎಂದು ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಏನು ನಡೆದಿದೆ ಎಂಬುದರ ಕುರಿತಾಗಿ ಸತ್ಯವನ್ನು ಹೇಳಬೇಕು. ಆರೋಪಿಗಳು ಯಾರೇ ಆಗಿರಲಿ, ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಒತ್ತಾಯಿಸಿದರು.
ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ:
ಈ ಹಿಂದಿನಿಂದಲೂ ಮುಸ್ಲಿಂಮರು ರೇಷ್ಮೆ, ಮಾವು, ಹುಣಸೆ ಮುಂತಾದ ವ್ಯಾಪಾರಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಈಗ ಅವರನ್ನು ಈ ವ್ಯಾಪಾರಗಳಿಂದ ದೂರವಿಡುವ ಪ್ರಯತ್ನ ನಡೆಯುತ್ತಿದೆ. ಇದು ಸರಿಯಲ್ಲ. ಇದರಿಂದಾಗಿ ರೈತರಿಗೆ ತುಂಬಾ ನಷ್ಟವಾಗುತ್ತದೆ. ರೈತರ ಹೊಟ್ಟೆ ಮೇಲೆ ಹೊಡೆಯಬೇಡಿ, ಅವರನ್ನು ಬದುಕಲು ಬಿಡಿ ಎಂದರು.
ಮಂಡ್ಯ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳಿಗೆ ಆಲ್ ಖೈದಾ ಭಯೋತ್ಪಾದಕ ಸಂಘಟನೆ ಬೆಂಬಲ ನೀಡುತ್ತಿರುವ ಬಗ್ಕುಗೆ ಕೇಳಿಬಂದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆಲ್ ಖೈದಾ ಭಯೋತ್ಪಾಧಕ ಸಂಘಟನೆಯನ್ನು ಕಟ್ಟಿಕೊಂಡು ರಾಜ್ಯದ ಜನರಿಗೆ ಏನು ಆಗಬೇಕಿಲ್ಲ. ಆದರೆ ಸಮಾಜ ಘಾತುಕ ಶಕ್ತಿಗಳನ್ನು ಗುರುತಿಸಿ ಮಟ್ಟ ಹಾಕುವ ಕಾರ್ಯವಾಗಬೇಕು ಎಂದು ಹೇಳಿದರು.

ಅವಧಿಗೂ ಮುನ್ನ ಚುನಾವಣೆ ನಡೆದರೂ  ಎದುರಿಸಲು ಸಿದ್ಧ:
ರಾಜ್ಯದ ವಿಧಾನಸಭೆಗೆ ಅವಧಿಗೂ ಮುನ್ನವೇ ಚುನಾವಣೆ ನಡೆದರೂ ಅದನ್ನು ಎದುರಿಸಲು ಜೆಡಿಎಸ್ ಸಿದ್ಧವಿದೆ ಎಂದು ಅವರು ಹೇಳಿದರು.
ಕುಮಾರಸ್ವಾಮಿ ಕಾಂಗ್ರೆಸ್ ಮುಗಿಸಲು ಬಿಜೆಪಿಯವರಿಂದ ಸುಫಾರಿ ಪಡೆದಿದ್ದಾರೆ ಎಂದು ಕಾಂಗ್ರೆಸ್‌ನವರು ಆರೋಪಿಸಿದ್ದಾರೆ. ಆದರೆ ನಾನು ಸುಫಾರಿ ಪಡೆದಿಲ್ಲ, ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆದು ಜೆಡಿಎಸ್‌ನ್ನು ಮತ್ತೆ ಅಧಿಕಾರಕ್ಕೆ ತರಲು ಜನರಿಗೆ ಸುಫಾರಿ ನೀಡಿದ್ದೇನೆ ಎಂದರು.
ದೇವರ ಅನುಗ್ರಹದಿಂದ ಎರಡು ಬಾರಿ ಸಿಎಂ ಆಗಿದ್ದೇನೆ. ಮತ್ತೆ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿ ನಾನಿಲ್ಲ. ಹಿಂದೆ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದ ಕಾರಣದಿಂದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದೆ ಎಂದರು. ಶಾಸಕ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!