ಮಡಿಕೇರಿಯಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ-ತಾರಾಲಯ ಸ್ಥಾಪನೆ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ವಿಜ್ಞಾನದ ಆವಿಷ್ಕಾರಗಳ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ನಗರದ ಹೊರವಲಯದಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ರೂ.5.75 ಕೋಟಿ ವೆಚ್ಚದಲ್ಲಿ ತಾರಾಲಯ (ಪ್ಲಾನಿಟೋರಿಯಂ) ಸ್ಥಾಪಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮುಂದಾಗಿದೆ.
ನಗರದ ಹೊರವಲಯದ ಸೂಕ್ತ ಸ್ಥಳದಲ್ಲಿ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಹಯೋಗದಲ್ಲಿ ಈ ಯೋಜನೆಗಳು ಅನುಷ್ಠಾನಗೊಳ್ಳಲಿದ್ದು, ಈ ಕುರಿತು ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ ಅವರು ಸೋಮವಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರೋತ್ಸಾಹಕ ಸೊಸೈಟಿಯ ಅಧಿಕಾರಿಗಳೊಂದಿಗೆ ನಡೆಸಿದ ಪೂರ್ವಭಾವಿ ಸಭೆಯಲ್ಲಿ ನಗರದ ಹೊರವಲಯದ ಕರ್ಣಂಗೇರಿ ಗ್ರಾಮದ ಬಳಿ ವಿಜ್ಞಾನ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದ ಸಾಧ್ಯತಾ ಅಂಶಗಳ ಕುರಿತು ಜಿಲ್ಲಾಧಿಕಾರಿ ಚರ್ಚಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರವನ್ನು ಜನಸಾಮಾನ್ಯರಿಗೆ ಪರಿಚಯಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕತೆಗಳನ್ನು ಬೆಳೆಸಲು ಅನುವಾಗುವಂತೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರದ ಮಾದರಿಯಲ್ಲಿ ಜಿಲ್ಲೆಯಲ್ಲೂ ನೂತನ ತಂತ್ರಜ್ಞಾನ ಮತ್ತು ತಾಂತ್ರಿಕ ವಿನ್ಯಾಸದೊಂದಿಗೆ ವಿಜ್ಞಾನ ಕೇಂದ್ರ ನಿರ್ಮಿಸಲು ಕ್ರಮಕೈಗೊಳ್ಳಬೇಕು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಿಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ವಿಜ್ಞಾನವನ್ನು ಜನ ಸಾಮಾನ್ಯರೆಡೆಗೆ ಕೊಂಡೊಯ್ದು, ಜನರನ್ನು ವಿಜ್ಞಾನದ ಕಡೆಗೆ ಕರೆದೊಯ್ಯುವ ದೂರದೃಷ್ಟಿಯೊಂದಿಗೆ ಹಾಗೂ ರಾಜ್ಯಾದ್ಯಂತ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಪ್ರಚುರಪಡಿಸಲು ರಾಜ್ಯ ಸರ್ಕಾರದ ಸಂಪೂರ್ಣ ಅನುದಾನದೊಂದಿಗೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಹಂತಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಜಿಲ್ಲೆಯಲ್ಲೂ ಕೂಡಾ ಮಡಿಕೇರಿ ನಗರದ ಹೊರವಲಯದ ಕರ್ಣಂಗೇರಿ ಗ್ರಾಮದಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸುವ ಕುರಿತು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಲಾಗಿದೆ ಎಂದರು.
ಈ ಸ್ಥಳದಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸುವ ಕುರಿತು ತಾಂತ್ರಿಕ ಸಾಧ್ಯತೆಗಳನ್ನು ಪರಿಶೀಲಿಸಿ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ದಿನಗಳಲ್ಲಿ ಈ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದರು.
ಉದ್ದೇಶಿತ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನದ ನಾನಾ ಸಲಕರಣೆ, ಸಾಧನಗಳು, ಪ್ರಯೋಗಾಲಯ ಹಾಗೂ ವಿಜ್ಞಾನಿಗಳ ಪ್ರತಿಮೆಗಳು, ವಿವಿಧ ಪ್ರಯೋಗದ ವಸ್ತುಗಳನ್ನು ಕೇಂದ್ರದಲ್ಲಿ ಅಳವಡಿಸಲಾಗುವುದು ಎಂದು ನುಡಿದರು..
ವಿಜ್ಞಾನ ಕೇಂದ್ರದ ರೂಪುರೇಷೆ, ಯೋಜನೆ ಹಾಗೂ ಅಂದಾಜು ವೆಚ್ಚದ ಮಾಹಿತಿ ನೀಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವೈಜ್ಞಾನಿಕ ಅಧಿಕಾರಿ ಡಾ.ಆರ್.ಟಿ.ವೆಂಕಟೇಶ್, ವಿಜ್ಞಾನದ ಹೊಸ ತಂತ್ರಜ್ಞಾನ ಮತ್ತು ಬೆಳವಣಿಗೆ ದಿಸೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯಿಂದ ರೂ.4 ಕೋಟಿ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ರೂ.5.75 ಕೋಟಿ ವೆಚ್ಚದಲ್ಲಿ ತಾರಾಲಯ ನಿರ್ಮಿಸಲು ಅಂದಾಜು ವೆಚ್ಚ ತಯಾರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಡಿಡಿಪಿಐ ವೇದಮೂರ್ತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಮತ್ತು ವಿಜ್ಞಾನ ಕಾರ್ಯಕ್ರಮಗಳ ಸಂಘಟಕ ಟಿ.ಜಿ.ಪ್ರೇಮಕುಮಾರ್, ವಿಜ್ಞಾನ ಕೇಂದ್ರ ಆರಂಭದ ಕುರಿತು ಅಭಿಪ್ರಾಯ ಮಂಡಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವೈಜ್ಞಾನಿಕ ಅಧಿಕಾರಿ ಡಾ.ರವಿಕುಮಾರ್ ತಾಂತ್ರಿಕ ಮಾಹಿತಿ ನೀಡಿದರು.
ಸ್ಥಳ ಪರಿಶೀಲನೆ: ಸಭೆಗೂ ಮೊದಲು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪಿಸುವ ಸಂಬಂಧ ತಹಶೀಲ್ದಾರ್ ಪಿ.ಎಸ್.ಮಹೇಶ್ ನೇತೃತ್ವದಲ್ಲಿ ನಗರದ ಹೊರ ವಲಯದ ಕರ್ಣಂಗೇರಿ ಗ್ರಾಮದ ಬಳಿ ಸ್ಥಳ ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ವೈಜ್ಞಾನಿಕ ಅಧಿಕಾರಿಗಳಾದ ಡಾ. ಆರ್.ಟಿ.ವೆಂಕಟೇಶ್ ಮತ್ತು ಡಾ ಎಂ.ಎಸ್. ರವಿಕುಮಾರ್, ಡಿಡಿಪಿಐ ವೇದಮೂರ್ತಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಟಿ.ಜಿ.ಪ್ರೇಮಕುಮಾರ್, ಕಂದಾಯ ಪರಿವೀಕ್ಷಕ ಪ್ರಸಾದ್, ಗ್ರಾಮ ಲೆಕ್ಕಿಗ ವಿ.ಸಿ.ಸಣ್ಣರುದ್ರಪ್ಪ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!