ಹೊಸ ದಿಗಂತ ವರದಿ, ಕಲಬುರಗಿ:
ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಭಾರತ 100 ಕೋಟಿ ಕೋವಿಡ್ ಲಸಿಕೆ ನೀಡಿದ ವಿಶ್ವದ ಮೊದಲ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಭಾರತೀಯ ಜನತಾ ಪಕ್ಷದ ನಗರ ಘಟಕದ ಅಧ್ಯಕ್ಷ ಸಿದ್ದಾಜೀ ಪಾಟೀಲ ಹೇಳಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೇಶದಲ್ಲಿ 100 ಕೋಟಿ ಕೋವಿಡ್ ಲಸಿಕೆ ನೀಡಿದ್ದು, ಭಾರತ ದೇಶದ ಮಹತ್ವದ ಸಾಧನೆಯಾಗಿದೆ. ಈ ಸಾಧನೆಗೆ ಕಾರಣಿಕರ್ತರಾದ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆರಂತೆ ಇರುವ ಅನೇಕ ಕೋವಿಡ್ ವಾರಿಯರ್ಸಗಳಿಗೆ ಅಭಿನಂದನೆಗಳನ್ನು ಸಲ್ಲಿಸುವ ದಿನವಾಗಿದೆ ಎಂದರು. ವಿಶೇಷವಾಗಿ ರಾಜ್ಯ ಬಿಜೆಪಿ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜನರ ಪರವಾಗಿ ಅಭಿನಂದಿಸುತ್ತದೆ ಎಂದರು.
ವಿರೋಧ ಪಕ್ಷವಾದ ಕಾಂಗ್ರೆಸ್,ನ ನಿರಂತರ ಅಪಪ್ರಚಾರ ಮತ್ತು ಅಸಹಕಾರ ನಡುವೆ ಈ ಸಾಧನೆ ಮಾಡಲಾಗಿದೆ. ಈ ಫೈಕಿ ಶೇ. 94ರಷ್ಟು ಲಸಿಕೆ ನೀಡಿಕೆಯೂ ಕೇವಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ನಡೆದಿದ್ದು, ಶೇ. 6 ರಷ್ಟು ಮಾತ್ರ ಖಾಸಗಿಯವರಿಂದ ನೀಡಲಾಗಿದೆ. ಜಗತ್ತಿನ 95ಕ್ಕೂ ಹೆಚ್ಚು ದೇಶಗಳು ಭಾರತದಿಂದ ಕೋವಿಡ್ ಲಸಿಕೆಗಳನ್ನು ಪಡೆಯುತ್ತಿವೆ ಎಂದು ತಿಳಿಸಿದರು. ಭಾರತದಲ್ಲಿ ಮೊದಲನೇ 85 ದಿನಗಳಲ್ಲಿ 10 ಕೋಟಿ ಜನರಿಗೆ ನೀಡಲಾಗಿದ್ದು, ನಂತರದ 45 ದಿನಗಳಲ್ಲಿ 20 ಕೋಟಿ ನೀಡಲಾಗಿದೆ. ಮುಂದಿನ 29 ದಿನಗಳಲ್ಲಿ 30 ಕೋಟಿ, ಆ ಮುಂದಿನ 24 ದಿನಗಳಲ್ಲಿ 40 ಕೋಟಿ ಹಂತದಲ್ಲಿ ಲಸಿಕೆ ನೀಡಲಾಗಿದೆ ಎಂದರು.
ಈ ಹಂತದಲ್ಲಿ ಇತರೆ ರಾಷ್ಟ್ರಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಭಾರತ 100 ಕೋಟಿ ಲಸಿಕೆ ನೀಡುವ ಮೂಲಕ ಮಹತ್ವದ ಸಾಧನೆ ಮಾಡಿದೆ ಎಂದ ಅವರು, ಸ್ವಸ್ಥ ಸಮಾಜ, ಸ್ವಸ್ಥ ದೇಶ ಎನ್ನುವ ಸಂಕಲ್ಪದೊಂದಿಗೆ ನಾವೆಲ್ಲರೂ ಲಸಿಕೆ ಹಾಕಿಸಿಕೊಳ್ಳಣಾ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಉಮೇಶ ಪಾಟೀಲ, ಮಹಾದೇವ ಬೆಳಮಗಿ, ಸೂರಜ ತಿವಾರಿ, ಅರುಣ ಕುಲಕರ್ಣಿ ಸೇರಿದಂತೆ ಹಲವರು ಇದ್ದರು.