Saturday, August 13, 2022

Latest Posts

ಪಂಚಾಯತ್ ಗೆ ತಲಾ 100 ಮನೆ ಮಂಜೂರು ಮಾಡಿ: ಪಂಚಾಯತ್ ಸದಸ್ಯರ ಒಕ್ಕೂಟ ಆಗ್ರಹ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ ಮಡಿಕೇರಿ:

ಬಡ ಜನತೆಗೆ ಸೂರು ಒದಗಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯ್ತಿಗೆ ವಸತಿ ಯೋಜನೆಯಡಿ ನೂರು ಮನೆಗಳನ್ನು ಮಂಜೂರು ಮಾಡಬೇಕೆಂದು ನಾಪೋಕ್ಲು ಬ್ಲಾಕ್ ಪಂಚಾಯತ್ ಸದಸ್ಯರ ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದೆ.
ಸುದ್ದಿ ಗೋಷ್ಠಿಯಲ್ಲಿ ಕರಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಚಂದ್ರ ನಾಯರ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡಜನತೆಗೆ ವಸತಿ ಯೋಜನೆಯಡಿ ಒಂದೇ ಒಂದು ಮನೆಯನ್ನೂ ಮಂಜೂರು ಮಾಡಿಲ್ಲ. ಈ ಹಿಂದೆ ಮಂಜೂರಾದ ಮನೆಗಳಿಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಅನುದಾನವನ್ನೂ ಸಮರ್ಪಕವಾಗಿ ಬಿಡುಗಡೆ ಮಾಡದೆ ಜನರನ್ನು ವಂಚಿಸಿರುವುದಾಗಿ ಆರೋಪಿಸಿದರು.
ವಸ್ತುಸ್ಥಿತಿ ಹೀಗಿದ್ದರೂ ಸರ್ಕಾರಗಳು ಮನೆ ಮಂಜೂರು ಮಾಡಿರುವುದಾಗಿ ಸುಳ್ಳು ಹೇಳುತ್ತಾ ಬರುತ್ತಿವೆ. ಜಿಲ್ಲೆಯ ಎರಡು ಕ್ಷೇತ್ರಗಳ ಶಾಸಕರು ಮಂಜೂರಾದ ಮನೆಗಳ ಮಾಹಿತಿಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರಸ್ತುತ ವಸತಿ ಯೋಜನೆಯಡಿ ಮನೆಗಳನ್ನು ಪಡೆಯಲು 32 ಸಾವಿರ ರೂ. ಆದಾಯ ಮಿತಿಯನ್ನು ಹಾಕಲಾಗಿದೆ. ಇದರಿಂದ ಬಿಪಿಎಲ್ ಪಡಿತರದಾರರಿಗೂ ಮನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಆದಾಯ ಮಿತಿಯನ್ನು ಕನಿಷ್ಟ 1 ಲಕ್ಷ ರೂ.ಗಳಿಗಾದರೂ ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ-ಪಂಗಡದವರಿಗೆ ಒಂದು ಮನೆಗೆ ನಿಗದಿ ಪಡಿಸಿರುವ ಮೊತ್ತವನ್ನು 5 ಲಕ್ಷ ರೂ. ಮತ್ತು ಸಾಮಾನ್ಯ ವರ್ಗದವರಿಗೆ 3 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕೆಂದು ಅವರು ಆಗ್ರಹಿಸಿದರು.
ಪಂಚಾಯತ್ ಗಳಿಗೆ ಅನುದಾನ ಕಡಿತ: ಕುಂದಚೇರಿ ಗ್ರಾಪಂ ಸದಸ್ಯಹ್ಯಾರಿಸ್ ಕೆ.ಯು. ಮಾತನಾಡಿ, ಗ್ರಾಮ ಪಂಚಾಯತ್ ಗಳಿಗೆ 15ನೇ ಹಣಕಾಸು ಯೋಜನೆಯಡಿ ಅನುದಾನವನ್ನು ಸರ್ಕಾರ ಕಡಿತಗೊಳಿಸಿದೆ. ಇದರಿಂದ ಪಂಚಾಯತ್ ಗಳ ಕಾರ್ಯನಿರ್ವಹಣೆ ಕಷ್ಟಸಾಧ್ಯವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಎರಡು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಹಣ ಬಂದಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮದೆ ಗ್ರಾಮ ಪಂಚಾಯ್ತಿ ಸದಸ್ಯ ಅಗಸ್ಟಿನ್ ಜಯರಾಜ್ ಮಾತನಾಡಿ, ಕೊರೋನಾ ಹಿನ್ನೆಲೆಯಲ್ಲಿ ಪ್ರಸ್ತುತ ಗ್ರಾಮ ಪಂಚಾಯ್ತಿಗಳಿಗೆ ಕಟ್ಟಡ ತೆರಿಗೆ, ಪ್ರಾವಾಸೋದ್ಯಮ ತೆರಿಗೆಗಳು ಸಮರ್ಪಕವಾಗಿ ಬರುತ್ತಿಲ್ಲ. ಪ್ರವಾಸೋದ್ಯಮಕ್ಕೆ ಅವಕಾಶ ನಿರ್ಬಂಧಿಸಿದ್ದರಿಂದ ಪಂಚಾಯ್ತಿಯ ಹಲವು ಹೋಂ ಸ್ಟೇ, ರೆಸಾರ್ಟ್ ಗಳವರು ತೆರಿಗೆ ವಿನಾಯಿತಿಯನ್ನು ಕೋರಿದ್ದಾರೆಂದು ತಿಳಿಸಿದರಲ್ಲದೆ, ಜಿಲ್ಲಾಡಳಿತ ಈ ಬಗ್ಗೆ ಸ್ಪಷ್ಟ ಸುತ್ತೋಲೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕುಂಜಿಲ ಕಕ್ಕಬ್ಬೆ ಗ್ರಾಪಂ ಅಧ್ಯಕ್ಷ ಸಂಪನ್ ಅಯ್ಯಪ್ಪ, ಬೇಂಗೂರು ಚೇರಂಬಾಣೆ ಗ್ರಾಪಂ ಸದಸ್ಯ ಬಶೀರ್ ಕೆ.ಎಂ., ಕುಂದಚೇರಿ ಗ್ರಾಪಂ ಸದಸ್ಯ ಪಿ.ಬಿ. ದಿನೇಶ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss