108 ತುರ್ತು ಆಂಬುಲೆನ್ಸ್‌ ಸೇವೆಯಲ್ಲಿ ತಾಂತ್ರಿಕ ದೋಷ: ಆತಂಕ ಬೇಡವೆಂದ ಆರೋಗ್ಯ ಸಚಿವರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸರ್ಕಾರಿ ಆಂಬುಲೆನ್ಸ್‌ ಸೇವೆಯಾದ 108 ಆರೋಗ್ಯ ಕವಚ ಸಹಾಯ ವಾಣಿಯಲ್ಲಿ ತಾಂತ್ರಿಕ ದೋಷದಿಂದ ಅಡಚಣೆಗಳಾಗುತ್ತಿದ್ದು ಈ ಕುರಿತು ಅಗತ್ಯ ಕ್ರಮವಹಿಸಲಾಗಿದೆ. ಸಾರ್ವಜನಿಕರು ಆತಂಕ ಗೊಳ್ಳುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಸಾಫ್ಟ್‌ ವೇರ್‌ ನಲ್ಲಿನ ತೊಂದರೆಯುಂಟಾದ ಕಾರಣ ತಾಂತ್ರಿಕ ದೋಷದ ಸಮಸ್ಯೆ ಎದರುರಾಗಿದ್ದು ಈ ಸಂಬಂಧ ಐಟಿ ವ್ಯವಸ್ಥೆಯ ಗುತ್ತಿಗೆ ಪಡೆದಿರುವ GVK-EMRI ಸಂಸ್ಥೆಗೆ ಸೂಚನೆ ನೀಡಲಾಗಿದ್ದು ಸಮಸ್ಯೆ ತ್ವರಿತವಾಗಿ ಪರಿಹಾರ ವಾಗಲಿದೆ ಎಂದು ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ.

ಏನಾಗಿತ್ತು ಸಮಸ್ಯೆ :
ತಾಂತ್ರಿಕ ದೋಷದ ಕಾರಣದಿಂದ ಕರೆಗಳನ್ನು ಸ್ವೀಕರಿಸಿ ಆಂಬುಲೆನ್ಸ್‌ ವ್ಯವಸ್ಥೆ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಈ ಹಿಂದೆ ಒಂದು ಕರೆ ಬಂದ 2 ನಿಮಿಷದೊಳಗೆ ಪರಿಹಾರ ನೀಡಲಾಗುತ್ತಿತ್ತು. ಆದರೆ ಈಗ ಈ ಪ್ರಕ್ರಿಯೆಯು 7-8 ನಿಮಿಷಗಳ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಸೇವೆಯಲ್ಲಿಯೂ ವಿಳಂಬವಾಗುತ್ತಿದೆ. ಪ್ರತಿದಿನ 7 ರಿಂದ 8 ಸಾವಿರ ಕರೆಗಳು ಬರುತ್ತಿದ್ದವು ಆದರೀಗ 2 ರಿಂದ 2.5 ಸಾವಿರ ಮಾತ್ರವೇ ಸ್ವೀಕರಿಸಲು ಸಾಧ್ಯವಾಗುತ್ತಿದೆ.

ಅಗತ್ಯ ಕ್ರಮ ಕೈಗೊಳ್ಳಲಾಗಿದೆ:

ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತಿಳಿಸಿದ್ದು “ಎಲ್ಲಾ ಆಸ್ಪತ್ರೆಗಳಿಗೆ ಅಂತರ್‌ ವರ್ಗಾವಣೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಸೂಚಿಸಲಾಗಿದ್ದು ಆಂಬುಲೆನ್ಸ್‌ ಚಾಲಕರಿಗೆ ತಮ್ಮ ವೈಯುಕ್ತಿಕ ಸಂಖ್ಯೆಗೆ ಕರೆ ಬಂದರೂ ಅಗತ್ಯ ಸೇವೆ ನೀಡವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಮ್ಯಾನ್ಯುವಲ್ ಐಡಿಗಳನ್ನು ಸೃಷ್ಟಿಸಿ ಜನರಿಗೆ ತುರ್ತು ಸೇವೆಒದಗಿಸುವತ್ತ ಗಮನ ಹರಿಸಲಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೇ 112ತುರ್ತು ಸಹಾಯವಾಣಿಯಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಿ ಅಲ್ಲಿಂದ 108 ಸಹಾಯವಾಣಿಯ ತಂಡದ ಮುಖ್ಯಸ್ಥರಿಗೆ ಕರೆಗಳನ್ನು ಡೈವರ್ಟ್ ಮಾಡಿ ಆ ಮೂಲಕ ಮ್ಯಾನ್ಯುವಲ್ ಐಡಿ ಜನರೇಟ್ ಮಾಡಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ 104- ಸಹಾಯವಾಣಿಯನ್ನು ಕೂಡ ಬಳಸಿಕೊಂಡು ತುರ್ತು ಆಂಬುಲೆನ್ಸ್ ಸಹಾಯ ನೀಡಲಾಗುತ್ತಿದೆ. ಇದಲ್ಲದೇ ಮಿಸ್ಡ್‌ ಕಾಲ್‌ ಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದು ಜನರಿಗೆ ತುರ್ತು ಆರೋಗ್ಯ ಸೇವೆಗಳು ತಲುಪವಲ್ಲಿ ವಿಳಂಬವಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ಸಚಿವ ಸುಧಾಕರ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!