Sunday, August 14, 2022

Latest Posts

13ನೇ ಐಪಿಎಲ್ ಫೈನಲ್: ರಿಷಬ್-ಶ್ರೇಯಸ್ ಜೊತೆಯಾಟ; ಮುಂಬೈಗೆ 157 ರನ್‌ಗಳ ಗುರಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಇಲ್ಲಿ ಮಂಗಳವಾರ ನಡೆದ 13ನೇ ಐಪಿಎಲ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ದಿಲ್ಲಿ ಕ್ಯಾಪಿಟಲ್ಸ್ ಮುಂಬೈಗೆ157 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದಿಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರರ ಹೀನಾಯ ಪ್ರದರ್ಶನದ ನಡುವೆಯೂ 20 ಓವರುಗಳಲ್ಲಿ 156 ರನ್ ಗಳಿಸಿತು. ಸ್ಟೊಯಿನಿಸ್ ಮೊದಲ ಬಾಲ್‌ನಲ್ಲೇ ಬೌಲ್ಟ್ ಬಾಲ್‌ನಲ್ಲಿ ಕೀಪರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ವನ್‌ಡೌನ್ ದಾಂಡಿಗ ಅಜಿಂಕ್ಯ ರೆಹಾನೆ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ತಂಡದ ಮೊತ್ತ 16 ಆಗಿದ್ದಾಗ ಬೌಲ್ಟ್‌ಗೆ ಎರಡನೇ ಬಲಿಯಾದರು. ರೆಹಾನೆ ಗಳಿಕೆ ಕೇವಲ 2. ಅನುಭವಿ ಆರಂಭ ಆಟಗಾರ ಶಿಖರ್ ಧವನ್ ಕೂಡಾ ಕುಸಿತ ತಡೆಗಟ್ಟಲು ವಿಫಲರಾದರು. 15 ರನ್ ಗಳಿಸಿದ ಧವನ್ ಜಯಂತ್ ಯಾದವ್ ಬಾಲ್‌ನಲ್ಲಿ ಬೌಲ್ಡ್ ಆದರು. ಆಗ ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 22. ನಾಯಕ ಶ್ರೇಯಸ್ ಅಯ್ಯರ್ ಜೊತೆಗೂಡಿದ ರಿಷಬ್ ಪಂತ್ ತಂಡದ ರಕ್ಷಣೆಗೆ ನಿಂತರು. ಇಬ್ಬರೂ ಮುಂಬೈನ ಬಲಿಷ್ಠ ಬೌಲಿಂಗನ್ನು ಎದುರಿಸಿ ರನ್ ಗತಿಯನ್ನು ಏರಿಸತೊಡಗಿದರು. 96 ರನ್‌ಗಳ ಜೊತೆಯಾಟ ನಡೆಸಿದ ಬಳಿಕ ರಿಷಬ್ ಪಂತ್ 56 ರನ್ ಗಳಿಸಿ ನಥನ್ ಕಲ್ಟರ್‌ಗೆ ಬಲಿಯಾದರು.   ನಂತರ ಬಂದ ಯಾವೊಬ್ಬ ಆಟಗಾರನೂ ಮುಂಬೈಯ ಬೌಲಿಂಗ್ ದಾಳಿ ಎದುರಿಸಿ ನಿಲ್ಲಲು ಸಫಲರಾಗಲಿಲ್ಲ. ಅಂತಿಮವಾಗಿ 20 ಓವರ್‌ಗಳಲ್ಲಿ ದಿಲ್ಲಿ 7 ವಿಕೆಟ್ ಕಳಕೊಂಡು 156 ರನ್ ಗಳಿಸಿತು. ನಾಯಕ ಶ್ರೇಯಸ್ ಅಯ್ಯರ್ 65 ರನ್ ಗಳಿಸಿ ಔಟಾಗದೆ ಉಳಿದರು.
ಮುಂಬೈ ಪರ ಬೌಲ್ಟ್ 4 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದರೆ, ಬೂಮ್ರಾ ವಿಕೆಟ್ ಕೀಳಲು ವಿಫಲರಾದರು. ನಥನ್ ಕಲ್ಟರ್ 2 ವಿಕೆಟ್ ಪಡೆದರೆ ಜಯಂತ್ ಯಾದವ್ 1 ವಿಕೆಟ್ ಪಡೆದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss