ಹೊಸ ದಿಗಂತ ಆನ್ ಲೈನ್ ಡೆಸ್ಕ್:
13ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಪ್ರೇಕ್ಷಕರನ್ನು ಸಿನಿಮಾದತ್ತ ಸೆಳೆಯಲು ಪೂರಕ ವಾತಾವರಣವನ್ನು ನಿರ್ಮಿಸಲಿದೆ. ಹಾಗಾಗಿ 2021ರ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಸಿನಿಮೋತ್ಸವವನ್ನು ಆಯೋಜಿಸಲು ಅನುಮತಿ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಅವರ ನೇತೃತ್ವದ ನಿಯೋಗವು ಮಾಡಿದ ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹಮತ ಸೂಚಿಸಿದ್ದಾರೆ.
ಸುನಿಲ್ ಪುರಾಣಿಕ್ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ,13ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಆಯೋಜಿಸಲು ಅನುಮತಿ ನೀಡುವಂತೆ ಕೋರಿದ್ದು, 12 ವರ್ಷಗಳಿಂದ ಸತತವಾಗಿ ಈ ಸಿನಿಮೋತ್ಸವ ಯಶಸ್ಸು ಕಾಣುತ್ತಿದೆ. ವಿಶ್ವದಲ್ಲಿ 5 ಸಾವಿರ ಸ್ಥಳಗಳಲ್ಲಿ ಚಲನಚಿತ್ರೋತ್ಸವಗಳು ನಡೆಯುತ್ತಿವೆ. ಆದರೆ, ಅವುಗಳಲ್ಲಿ ಕೇವಲ 45 ಚಲನಚಿತ್ರೋತ್ಸವಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆ.
ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ ಆಯೋಜಿಸಲು ಮಾನ್ಯತೆ ದೊರೆತಲ್ಲಿ ಇದು ವಿಶ್ವದಲ್ಲಿ 46ನೇ ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಆದ್ದರಿಂದ 13 ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವವನ್ನು ಆಯೋಜಿಸಲು ಸಮ್ಮತಿ ನೀಡುವಂತೆಯೂ ನಿಯೋಗವು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು. ಸಿಎಂ ಅವರು ಸಹಮತ ಸೂಚಿಸಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಡಿ.ಆರ್. ಜಯರಾಜ್, ಕಲಾ ನಿರ್ದೇಶಕ ಎನ್. ವಿದ್ಯಾ ಶಂಕರ್, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶೃತಿ, ವಾರ್ತಾ ಇಲಾಖೆಯ ಆಯುಕ್ತ ಡಾ.ಪಿ.ಎಸ್. ಹರ್ಷ, ಪತ್ರಕರ್ತ ಮುರಳೀಧರ್ ಖಜಾನೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ರಿಜಿಸ್ಟ್ರಾರ್ ಜಿ. ಹಿಮಂತರಾಜು ಇದ್ದರು.