ಮಡಿಕೇರಿ: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಯಲ್ಲಿ ಗೃಹ ಸಂಪರ್ಕ ತಡೆಯಲ್ಲಿರುವವರ ಸಂಖ್ಯೆ ೯೬ಕ್ಕೆ ಇಳಿಕೆಯಾಗಿದ್ದು, ಇವರಲ್ಲಿ ದೆಹಲಿಯ ಧಾರ್ಮಿಕ ಸಮ್ಮೇಳನಕ್ಕೆ ತೆರಳಿ ವಾಪಾಸಾದ ೧೪ಮಂದಿ ಹಾಗೂ ರಾಜ್ಯ ಇತರ ಜಿಲ್ಲೆಗಳಿಂದ ಬಂದಿರುವ ೮೨ಮಂದಿ ಸೇರಿದ್ದಾರೆ.
ಇದರೊಂದಿಗೆ ಕಳೆದ ೧೪ ದಿನಗಳಿಂದ ಕೊಡಗಿನಲ್ಲಿ ಕೊರೋನಾ ಸೋಂಕಿನ ಯಾವುದೇ ಪ್ರಕರಣ ದಾಖಲಾಗದಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಜಿಲ್ಲಾಡಳಿತದ ಕ್ರಮಗಳಿಗೆ ಶ್ಲಾಘನೆ ವ್ಯಕ್ತಪಡಿಸಿದೆ.
ವಿದೇಶ ಪ್ರವಾಸ ಇತಿಹಾಸ ಇರುವವರನ್ನು ಪತ್ತೆ ಹಚ್ಚಿದ್ದ ಪ್ರಕರಣಗಳ ಪೈಕಿ ಗೃಹ ಸಂಪರ್ಕ ತಡೆಯಲ್ಲಿದ್ದ ಎಲ್ಲರೂ ೧೪ ದಿನಗಳ ಸಂಪರ್ಕ ತಡೆ ಅವಧಿಯನ್ನು ಪೂರೈಸಿದ್ದು ಯಾರಲ್ಲೂ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು ೧೦೦ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಇದರಲ್ಲಿ ಒಂದು ಪ್ರಕರಣ ಮಾತ್ರ ದೃಢಪಟ್ಟಿದ್ದು, ಈ ವ್ಯಕ್ತಿ ಗುಣಮುಖರಾಗಿ ಏ.೭ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ೮೯ ಮಂದಿಯಲ್ಲಿ ನೆಗೆಟಿವ್ ವರದಿ ಬಂದಿದ್ದು, ೧೧ ಪ್ರಕರಣಗಳಲ್ಲಿ ವರದಿಯನ್ನು ನಿರೀಕ್ಷಿಸಲಾಗಿದೆ. ಪ್ರಸ್ತುತ ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ೧೩ ಶಂಕಿತ ಪ್ರಕರಣಗಳಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.