ಮೊರ್ಬಿ ಸೇತುವೆ ದುರಂತದ ಸಂತ್ರಸ್ತರಿಗೆ 14.62 ಕೋಟಿ ರೂ. ಮಧ್ಯಂತರ ಪರಿಹಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊರ್ಬಿ ಸೇತುವೆ ದುರಂತದ ಸಂತ್ರಸ್ತರಿಗೆ ಗುಜರಾತ್ ಹೈಕೋರ್ಟ್ ನಿರ್ದೇಶನದಂತೆ ಒರೆವಾ ಗ್ರೂಪ್ ಮಧ್ಯಂತರ ಪರಿಹಾರ ನೀಡಲು 14.62 ಕೋಟಿ ರೂಪಾಯಿಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರದಲ್ಲಿ ಠೇವಣಿ ಇರಿಸಿದೆ ಎಂದು ಕಂಪನಿ ಮಂಗಳವಾರ ಹೈಕೋರ್ಟ್ಗೆ ತಿಳಿಸಿದೆ.

ಅಕ್ಟೋಬರ್ 30 ರಂದು ಮೊರ್ಬಿ ಪಟ್ಟಣದಲ್ಲಿ ತೂಗು ಸೇತುವೆ ಕುಸಿದು ಬಿದ್ದು 135 ಜನ ಸಾವನ್ನಪ್ಪಿದ್ದರು. ಒರೆವಾ ಗ್ರೂಪ್ ಬ್ರಿಟಿಷರ ಕಾಲದ ಈ ತೂಗು ಸೇತುವೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿ ವಹಿಸಿಕೊಂಡಿತ್ತು.

ಇದೀಗ ಸಂತ್ರಸ್ತರಿಗೆ ಮಧ್ಯಂತರ ಪರಿಹಾರವಾಗಿ ನೀಡಬೇಕಾದ ಸಂಪೂರ್ಣ 14.62 ಕೋಟಿ ರೂ.ಗಳನ್ನು ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಠೇವಣಿ ಮಾಡಲಾಗಿದೆ ಎಂದು ಒರೆವಾ ಕಂಪನಿಯು, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಜೆ ದೇಸಾಯಿ ಮತ್ತು ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರ ವಿಭಾಗೀಯ ಪೀಠಕ್ಕೆ ತಿಳಿಸಿದೆ.

ಫೆಬ್ರವರಿ 22 ರಂದು ನೀಡಿದ ಆದೇಶದಂತೆ ಪರಿಹಾರದ ಮೊತ್ತವನ್ನು ವಿತರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ. ಈ ಆದೇಶದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ನೆರವಿನೊಂದಿಗೆ ಸಂತ್ರಸ್ತರಿಗೆ ಪರಿಹಾರ ಹಂಚಿಕೆಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗೆ ನ್ಯಾಯಾಲಯ ಸೂಚಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!