Saturday, August 13, 2022

Latest Posts

14 ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ : ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಹೊಸ ದಿಗಂತ ವರದಿ, ಚಿತ್ರದುರ್ಗ:

ಬೋವಿ ಕಾಲೋನಿಯಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇರುವ ಪರಿಣಾಮ 14 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಬೋವಿ ಕಾಲೋನಿಯಲ್ಲಿ ಮಂಗಳವಾರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದ ಅವರು, ಈ ಮೊದಲು ಈ ಭಾಗದ ಜನರು ಕೊಳವೆಬಾವಿಯ ನೀರನ್ನು ಕುಡಿಯುತ್ತಿದ್ದರು. ಇದರಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗಿ ವಿವಿಧ ರೋಗಗಳಿಂದ ಜನರು ಬಳಲುವಂತಾಯಿತು. ಈ ಭಾಗದ ಜನರ ಸಮಸ್ಯೆ ಅರಿತು ಶುದ್ದ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನೇರವೇರಿಸಲಾಗಿದೆ ಎಂದರು.
ನಾನು ಶಾಸಕನಾದಾಗಿನಿಂದ ಈ ಭಾಗಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದೇನೆ. ಕುಡಿಯುವ ನೀರು, ಮನೆಗಳ ನಿರ್ಮಾಣ, ರಸ್ತೆ, ಶಾಲಾ ನಿರ್ಮಾಣ ಸೇರಿದಂತೆ ಇತರೆ ವಿವಿಧ ರೀತಿಯ ಕಾರ್ಯವನ್ನು ಮಾಡಿದ್ದೇನೆ. ನಾನು ಮೊದಲಬಾರಿ ಶಾಸಕನಾದಾಗ ಇಲ್ಲಿ ಬರೀ ಹಂದಿಗಳು ವಾಸವಾಗಿದ್ದವು. ತದ ನಂತರ ಸರ್ಕಾರದ ಮೇಲೆ ಒತ್ತಡ ಹಾಕಿ ಈ ಜಾಗವನ್ನು ಸ್ಲಂ ಎಂದು ಘೋಷಣೆ ಮಾಡಲಾಯಿತು. ಅದರಿಂದ ಸರ್ಕಾರದ ವಿವಿಧ ರೀತಿಯ ಸೌಲಭ್ಯಗಳು ನಿಮಗೆ ಸಿಗುವಂತೆ ಮಾಡಲಾಗಿದೆ ಎಂದರು.
ಭೋವಿ ಕಾಲೋನಿಯಲ್ಲಿ ಸರ್ಕಾರದ ವತಿಯಿಂದ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಇದಕ್ಕೆ ಜಾಗದ ಸಮಸ್ಯೆ. ಇದು ಖಾಸಗಿಯವರ ಜಾಗವಾಗಿದ್ದರಿಂದ ಇಲ್ಲಿ ಮನೆಗಳ ನಿರ್ಮಾಣ ಸದ್ಯಕ್ಕೆ ಕಷ್ಟ. ಇದರ ಬಗ್ಗೆ ಮಾಲೀಕರ ಬಳಿ ಮಾತನಾಡಿ ಜಾಗ ನೀಡುವಂತೆ ಮನವಿ ಮಾಡಲಾಗುವುದು. ಭೂಮಿಯ ಹಕ್ಕುಪತ್ರ ಮಾತ್ರ ನಿಮ್ಮ ಬಳಿ ಇಲ್ಲ. ಆದಾಗ್ಯೂ ನಿಮ್ಮನ್ನು ಯಾರೂ ಏನು ಮಾಡಲು ಸಾಧ್ಯವಿಲ್ಲ. ಯಾವುದೇ ಕಾರಣಕ್ಕೂ ಹೆದರಬೇಡಿ ನಾನಿದ್ದೇನೆ ಎಂದು ಭರವಸೆ ನೀಡಿದರು.
ಚಿತ್ರದುರ್ಗ ನಗರದಲ್ಲಿ ಸುಮಾರು 35 ಸ್ಲಂಗಳಿದ್ದು ಇದರಲ್ಲಿ ಈಗ 15 ಸ್ಲಂಗಳಲ್ಲಿ ಮನೆಗಳ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸರ್ವೆ ಕಾರ್ಯ ನಡೆಯುತ್ತಿದೆ. ಮುಂದಿನ ಕೆಲವೆ ದಿನಗಳಲ್ಲಿ ಅದು ಪೂರ್ಣವಾಗಲಿದೆ. ಬೋವಿ ಕಾಲೋನಿಯಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯ ನೀಡಲಾಗಿದೆ. ಶಾಂತಿಸಾಗರದ ಕುಡಿಯುವ ನೀರು, ಸಿಮೆಂಟ್ ರಸ್ತೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಹೈಸ್ಕೂಲ್ ನಿರ್ಮಾಣ ಮಾಡಬೇಕೆಂದುಕೊಂಡಿದ್ದೆ. ಆದರೆ ಜಾಗದ ಸಮಸ್ಯೆ ಇದೆ ಎಂದು ನುಡಿದರು.
ನಗರದ ಸಂಪಿಗೆ ಸಿದ್ದೇಶ್ವರ ಸ್ಕೂಲ್ ಹಿಂಭಾಗ, ಚನ್ನಕ್ಕಿಹೊಂಡ ಇಲ್ಲಿನ ಜನರಿಗೆ ಈ ಹಿಂದೆ ಮನೆಗಳನ್ನು ನೀಡಲಾಗಿದೆ. ಈ ಭಾಗಕ್ಕೆ ಯುಜಿಡಿ ನಿರ್ಮಾಣಕ್ಕೆ 50ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್, ಡಾ.ಸಿದ್ದಾರ್ಥ ಗುಂಡಾರ್ಪಿ, ಸದಸ್ಯರಾದ ಮಲ್ಲಿಕಾರ್ಜನ್, ಸದಸ್ಯರಾದ ವೆಂಕಟೇಶ್, ಹರೀಶ್, ಮಾಜಿ ಸದಸ್ಯರಾದ ವೆಂಕಟೇಶ್, ರವಿಕುಮಾರ್, ಗರಡಿ ಪ್ರಕಾಶ್, ಇಂಜಿನಿಯರ್ ಕಿರಣ್ ಸೇರಿದಂತೆ ಬಡಾವಣೆಯ ಮುಖ್ಯಸ್ಥರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss