ಹೊಸ ದಿಗಂತ ಆನ್ಲೈನ್ ಡೆಸ್ಕ್:
ಆಡಿಯೋ ವಿಚಾರವಾಗಿ ಮೈಸೂರಿನಲ್ಲಿ ಸೋಮವಾರ ನಡೆದ ಬೆಳವಣಿಗೆಗಳ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ತೀವ್ರ ನೋವು ವ್ಯಕ್ತಪಡಿಸಿದ್ದಾರೆ.
ತಮ್ಮ ನೂತನ ಚಿತ್ರ ‘ತೋತಾಪುರಿ’ ಚಿತ್ರೀಕರಣದ ವೇಳೆ ನಟ ದರ್ಶನ್ ಅಭಿಮಾನಿಗಳ ವರ್ತನೆ ಹಾಗೂ ನಂತರದ ಬೆಳವಣಿಗೆಗಳು ಮನಸ್ಸಿಗೆ ತುಂಬ ನೋವು ತಂದಿದೆ ಎಂದಿರುವ ಅವರು, ಮಂಗಳವಾರ ಟ್ವೀಟರ್ ಲೈವ್ ವಿಡಿಯೋದಲ್ಲಿ ಸುಮಾರು 14 ನಿಮಿಷಗಳ ಕಾಲ ಮಾತನಾಡಿದ್ದಾರೆ.
ನಾನೊಬ್ಬ ಆರೆಸ್ಸೆಸ್ ಕಾರ್ಯಕರ್ತ. ಮುಂದೆ ಹಿಂದೆ ಮಾತನಾಡುವ ಅಗತ್ಯ ನನಗಿಲ್ಲ. ನನ್ನ ಕರ್ತವ್ಯದ ಬಗ್ಗೆ ಮಾತಾಡುವುದು ನನ್ನ ಧರ್ಮ. ನಾನು ಏನು ಮಾತಾಡಿದ್ದೀನಿ. ನಾನೇನು ಕಳ್ಳತನ ಮಾಡಿಲ್ಲ, ಪಲಾಯನ ಮಾಡಿಲ್ಲ, ಅಡಗಿ ಕುಳಿತಿಲ್ಲ. ನಿನ್ನೆ ಬಂದ ಹುಡುಗರ ಮುಂದೇನೇ ಕುಳಿತುಕೊಂಡು ಮಾತನಾಡಿದ್ದೇನೆ ಎಲ್ಲಿಯೂ ಓಡಿಹೋಗಿಲ್ಲ. ಯಾವುದೋ ಒಂದು ವಿಷಯ ಇಟ್ಟುಕೊಂಡು ಜಗ್ಗೇಶ್ಗೆ ಅಪಮಾನ ಮಾಡಿದೀವಿ, ಮಾಡುತ್ತಿದ್ದೇವೆ ಅಂತಾ ಅಂದುಕೊಂಡರೆ ನನಗೆ ಯಾವ ನಷ್ಟವೂ ಇಲ್ಲ. ನಾನು ಯಾವುದಾದರೂ ಆಸ್ತಿ ಹೊಡೆಯೋಣ ಅಂತಾ ಮಾತಾಡಿದ್ದೇನಾ? ಯಾವುದಾದರೂ ಕಾಂಟ್ರ್ಯಾಕ್ಟ್ ಮಾಡ್ತೀನಿ ಅಂತಾ ಮಾತಾಡಿದ್ದೇನಾ? ಅಥವಾ ಕೋಟ್ಯಂತರ ರೂಪಾಯಿ ವಂಚನೆ ಮಾಡೋಣ ಅಂತಾ ಮಾತಾಡಿದ್ದೇನಾ? ಅಥವಾ ಯಾರಿಗಾದರೂ ನೋವು ಕೊಡೋಣ ಅಂತಾ ಮಾಡಿದ್ದೇನಾ? ಯಾರನ್ನಾದರೂ ಮರ್ಡರ್ ಮಾಡೋಣ ಅಂತಾ ಮಾತಾಡಿದ್ದೇನಾ? ಅಥವಾ ಈ ಕನ್ನಡದ ನೆಲಕ್ಕೆ ಅವಮಾನ ಮಾಡುವಂತ ಮಾತು ಆಡಿದ್ದೇನಾ? ನಾನು ನನ್ನ ಸಂಘಟನೆಯ ಪತ್ರಿಕೆ ಬಗ್ಗೆ ಖಾಸಗಿಯವನ ಜತೆ ಮಾತಾಡಿದ್ದೇನೆ. ಖಾಸಗಿಯಾಗಿ ನಡೆದಿರುವ ವಿಚಾರಧಾರೆಯನ್ನು ಸಾರ್ವಜನಿಕ ಮಾಡೋವಂತ ಕುತಂತ್ರ ವ್ಯವಸ್ಥೆಗೆ ನಾನು ಹೆದರಿಕೊಂಡು ಮನೆಯಲ್ಲಿ ಕುಳಿತುಕೊಳ್ಳುತ್ತೇನೆ ಎನ್ನುವ ಭಾವನೆ ಬೇಡ. ನಾ ತಪ್ಪೇ ಮಾಡಿಲ್ಲ ಅಂದ ಮೇಲೆ ಯಾಕೆ ಹೆದರಿಕೊಳ್ಳಲಿ ಎಂದು ಅವರು ಪ್ರಶ್ನಿಸಿದ್ದಾರೆ.
ನಾನು ೮೦ ರ ದಶಕದಲ್ಲಿ ಸಿನಿಮಾ ರಂಗಕ್ಕೆ ಬಂದವನು. ಡಾ.ರಾಜ್ಕುಮಾರ್, ಅಂಬರೀಷ್, ವಿಷ್ಣುವರ್ಧನ್, ಪ್ರಭಾಕರ್, ಶಂಕರ್ನಾಗ್, ಅನಂತನಾಗ್ ಅವರ ಜೊತೆ ಹೆಜ್ಜೆ ಹಾಕಿದವನು. ಅವರ ಜತೆ ಮಾತಾಡಿದವನು ನಾನು, ಬದುಕಿದವನು, ನಕ್ಕವನು, ಅತ್ತವನು. ಇವತ್ತಿಗೂ ನಾನು ಈ ಜಾಗದಲ್ಲಿ ನಿಂತಿದ್ದೇನೆ ಎಂದರೆ ಅದು ಕನ್ನಡಿಗರಿಂದ. ಕನ್ನಡಿಗರ ಪ್ರೀತಿ ಹೃದಯದಿಂದ. ನಾನು ಇವತ್ತಿಗೂ ಕೂಡ ಬೇರೆ ಭಾಷೆಯತ್ತ ಎಡಗಾಲನ್ನೂ ಇಟ್ಟಿಲ್ಲ. ಬೇರೆ ಭಾಷೆಯವರಿಗೂ ನಾನು ಜಾಲರಿ ಹಿಡಿದಿಲ್ಲ. ಯಾವ ಭಾಷೆಯವರನ್ನ ಕಟ್ಟುಕೊಂಡು ನನಗೆ ಏನೂ ಆಗಬೇಕಿಲ್ಲ. ಕನ್ನಡ ಕನ್ನಡ ಎಂದು ಸತ್ತಿದ್ದೇನೆ ಮುಂದೆ ಕೂಡಾ ಸಾಯುತ್ತೇನೆ. ನಾನು ಕಾಗೆ ಹಾರಿಸುವಂತಿದ್ದರೆ ೨೦ ಬಾರಿ ಶಾಸಕನಾಗುತ್ತಿದ್ದೆ, ಮಂತ್ರಿಯಾಗುತ್ತಿದ್ದೆ. ಬಕೀಟು ಹಿಡಿದಿದ್ದರೆ ಬೂಟು ನೆಕ್ಕಿದ್ದರೆ ನೂರಾರು ಹುದ್ದೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ, ನಾನು ಸ್ವಾಭಿಮಾನದಿಂದ ಬದುಕಿದ್ದೇನಂದರೆ ನಿಮ್ಮಿಂದ ಇಂತಹ ಮಾತುಗಳನ್ನು ಕೇಳೋಕಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾರಿಂದಾದರೂ ನನ್ನ ಮೈ ಮುಟ್ಟೋಕೆ ಆಗುತ್ತೇನ್ರಿ? ಏನ್ ಮಾತಾಡ್ತೀರಿ ನೀವು? ಇಂದು ಅನ್ಯಭಾಷಿಗರು ಬಂದು ದಬ್ಬಾಳಿಕೆ ಮಾಡುತ್ತಿದ್ದಾರೆ. ಕನ್ನಡದ ಮಕ್ಕಳನ್ನ ಬೆಳೆಯದಂತೆ ತುಳಿಯುತ್ತಿದ್ದಾರೆ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್ ಸತ್ತ ಮಾರನೇ ದಿನವೇ ಕನ್ನಡದ ಸ್ವಾಭಿಮಾನವೂ ಸಾಯುತ್ತಿದೆ. ನೆನಪಿಟ್ಟುಕೊಳ್ಳಿ, ಉಳಿದವರು ನಾವೇ ಮೂರು ನಾಲ್ಕು ಜನ. ನಾನು, ಶಿವರಾಜ್ಕುಮಾರ್, ರವಿಚಂದ್ರನ್, ರಮೇಶ್. ನಾವೆಲ್ಲಾ ಸತ್ತ ಮೇಲೆ ನಮ್ಮ ತಿಥಿ ಮಾಡಿ. ಆನಂದಪಡಿ, ಸಂತೋಷ ಪಡಿ ನಿವೇಲ್ಲ. ನಿಮ್ಮ ಮೇಲೆ ನಂಗೆ ಅಸಹ್ಯ ಹುಟ್ಟುತ್ತಿದೆ ಎಂದು ಬೇಸರಪಟ್ಟುಕೊಂಡಿದ್ದಾರೆ.