ಹೈಟಿಯಲ್ಲಿ ಭೀಕರ ಪ್ರವಾಹ: 15 ಮಂದಿ ಸಾವು, ಹಲವರು ಕಣ್ಮರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆರೇಬಿಯನ್​ ರಾಷ್ಟ್ರ ಹೈಟಿಯಲ್ಲಿ ಭೀಕರ ಪ್ರವಾಹ ಎದುರಾಗಿದೆ. ಭಾರಿ ಮಳೆಯಿಂದಾಗಿ ಹೈಟಿಯಾದ್ಯಂತ ವ್ಯಾಪಕವಾದ ಪ್ರವಾಹ ಮತ್ತು ಹಲವಾರು ಭೂಕುಸಿತಗಳು ಸಂಭವಿಸಿವೆ. ಪ್ರವಾಹಕ್ಕೆ 15 ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಘಟನೆಯಲ್ಲಿ ಸುಮಾರು 8ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ.

ವಾರಾಂತ್ಯದ ಖುಷಿಯಲ್ಲಿದ್ದ ಹೈಟಿ ಮಂದಿಗೆ ಧಾರಾಕಾರ ಮಳೆ ದೊಡ್ಡ ಪೆಟ್ಟನ್ನೇ ಕೊಟ್ಟಿದೆ. ಹೈಟಿಯ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿಯ ಪ್ರಕಾರ, ದೇಶದಾದ್ಯಂತ ನೂರಾರು ಮನೆಗಳು ನಾಶವಾಗಿವೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಸುಮಾರು 13,400 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸತತವಾಗಿ ಸುರಿದ ಭಾರಿ ಮಳೆಗೆ ಜನವಸತಿ ಪ್ರದೇಶಗಳು ಕೆರೆ ಹಾಗೂ ನದಿಗಳಂತಾಗಿ ಪರಿವರ್ತನೆಯಾಗಿವೆ. ದಿಢೀರ್ ಎಂದು ಉಂಟಾಗಿರುವ ಪ್ರವಾಹಕ್ಕೆ ಸುಮಾರು 7,400 ಕ್ಕೂ ಹೆಚ್ಚು ಕುಟುಂಬಗಳು ದಿವಾಳಿ ಆಗಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಹೈಟಿ ಜನರನ್ನು ಹೈರಾಣಾಗಿಸಿರುವ ಮಳೆ, ಬೆಳೆಯನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ. ಪ್ರವಾಹದಿಂದ ಸಂತ್ರಸ್ತರಾದವರ ಅಗತ್ಯಗಳಿಗೆ ಸ್ಪಂದಿಸಲು ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೈಟಿ ಪ್ರಧಾನಿ ಏರಿಯಲ್ ಹೆನ್ರಿ ತಿಳಿಸಿದ್ದಾರೆ.

ಜೂನ್ 1 ರಿಂದ ಹೈಟಿಗೆ ಅಪ್ಪಳಿಸುತ್ತಿರುವ ಮಳೆಯು ಈ ವಾರವೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಘಟಕದ ಮಹಾನಿರ್ದೇಶಕ ಮಾರ್ಸೆಲಿನ್ ಎಸ್ಟರ್ಲಿನ್ ಹೇಳಿದ್ದಾರೆ.

ಭಾರಿ ಮಳೆಯಿಂದಾಗಿ ಪ್ರವಾಹ ಹಾಗೂ ಹಿಮಕುಸಿತಗಳು ಆಗಲಿದ್ದು, ಇವು ರಾಷ್ಟ್ರಕ್ಕೆ ವ್ಯಾಪಕ ಹಾನಿ ಉಂಟುಮಾಡುತ್ತಿವೆ. ಪ್ರವಾಹದ ಹಿನ್ನೆಲೆಯಲ್ಲಿ ಶನಿವಾರ ಅಲ್ಲಿನ ಸರ್ಕಾರ ಮಹತ್ವದ ಸಭೆ ನಡೆಸಿ, ಪರಿಹಾರ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!