ಹೊಸದಿಗಂತ ವರದಿ, ಭಾಲ್ಕಿ:
ಯೂರಿಯಾ ಗೊಬ್ಬರ ಸೇವಿಸಿ ತಾಲ್ಲೂಕಿನ ಹಾಲಹಿಪ್ಪರಗಾ ಗ್ರಾಮದ ಕುರಿಗಾಹಿ ಗಣಪತರಾವ ನರಸಿಂಗರಾವ ಅವರಿಗೆ ಸೇರಿದ 15 ಆಡುಗಳು ಸಾವನ್ನಪ್ಪಿವೆ.
ಕಾಡು ಹಂದಿಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಹೊಲದಲ್ಲಿ ಯೂರಿಯಾ ಗೊಬ್ಬರ ಇಡಲಾಗಿತ್ತು. ಮಂಗಳವಾರ ರಾಶಿ ಮುಗಿದ ತೊಗರಿ ಹೊಲದಲ್ಲಿ ಆಡುಗಳನ್ನು ಮೇಯಲು ಬಿಟ್ಟಾಗ ಹೊಲದಲ್ಲಿದ್ದ ಯೂರಿಯಾ ಗೊಬ್ಬರ ತಿಂದು ಆಡುಗಳು ಅಸ್ವಸ್ಥಗೊಂಡಿದ್ದವು.
ಇದನ್ನು ಗಮನಿಸಿದ ಕುರಿಗಾಹಿ ಗಣಪತರಾವ್ ಅವರು, ಧನ್ನೂರ ಪಶುವೈದ್ಯ ಮಹಿಪಾಲಸಿಂಗ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ವೈದ್ಯರು ಬರುವಷ್ಟಲ್ಲಿ ಕೆಲ ಆಡುಗಳು ಸಾವನ್ನಪ್ಪಿದ್ದವು. ಇನ್ನು ಕೆಲವು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿವೆ ಎಂದು ಕುರಿ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬಾಲಾಜಿ ಜಬಾಡೆ ತಿಳಿಸಿದರು.
ಕುರಿ ನಿಗಮದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಅನುಗ್ರಹ ಯೋಜನೆ ಅಡಿಯಲ್ಲಿ ತಲಾ ₹5000 ತಕ್ಷಣ ಮಂಜೂರು ಮಾಡುತ್ತೇವೆ ಎಂದು ತಿಳಿಸಿದ್ದಾರೆ.