ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಖಾಸಗಿ ಆಸ್ಪತ್ರೆಗಳಲ್ಲಿ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ಯ ಬೆಲೆಯ ಕುರಿತು ಭಾರತ್ ಬಯೋಟೆಕ್ ಸಂಸ್ಥೆ ಬೇಸರ ಹೊರಹಾಕಿದೆ. ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್ನ್ನು ಕೇವಲ 150 ರೂ.ಗೆ ಕೇಂದ್ರ ಸರ್ಕಾರಕ್ಕೆ ದೀರ್ಘಾವಧಿಯವರೆಗೆ ಪೂರೈಕೆ ಮಾಡುವುದು ಕಷ್ಟ. ಇದು ಸ್ಪರ್ಧಾತ್ಮಕ ಬೆಲೆಯಲ್ಲ ಮತ್ತು ಸುಸ್ಥಿರ ದರವೂ ಅಲ್ಲ. ಹಾಗಾಗಿ ಲಸಿಕೆ ತಯಾರಿಕಾ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಖಾಸಗಿ ಮಾರುಕಟ್ಟೆಯಲ್ಲಾದರೂ ಬೆಲೆ ಹೆಚ್ಚಿಸುವ ಅಗತ್ಯತೆ ಇದೆ ಎಂದು ಹೇಳಿದೆ.
ಭಾರತ ಸರ್ಕಾರದ ನಿರ್ದೇಶನದಂತೆ, ಇಲ್ಲಿಯವರೆಗಿನ ನಮ್ಮ ಒಟ್ಟು ಕೊವಾಕ್ಸಿನ್ ಉತ್ಪಾದನೆಯಲ್ಲಿ ಶೇಕಡಾ 10 ಕ್ಕಿಂತಲೂ ಕಡಿಮೆ ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗಿದೆ, ಉಳಿದ ಹೆಚ್ಚಿನ ಪ್ರಮಾಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸರಬರಾಜು ಮಾಡಲಾಗಿದೆ. ಇಂತಹ ಸನ್ನಿವೇಶದಲ್ಲಿ ಎಲ್ಲಾ ಸರಬರಾಜುಗಳಲ್ಲಿ ನೀಡಲಾದ ಕೋವಾಕ್ಸಿನ್ ಲಸಿಕೆಯ ಬೆಲೆ ಪ್ರತಿ ಡೋಸ್ಗೆ ಸರಾಸರಿ 250 ರೂ.ಗಿಂತ ಕಡಿಮೆಯಿದೆ. ಶೇ.75 ರಷ್ಟು ಸಾಮರ್ಥ್ಯವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸರಬರಾಜು ಮಾಡಲಾಗುವುದು ಮತ್ತು ಕೇವಲ ಶೇ.25 ರಷ್ಟು ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಲಸಿಕೆ ಉಳಿದ ಔಷಧಗಳಂತಲ್ಲ. ಇದನ್ನು ಕೇಂದ್ರ ಸರ್ಕಾರ ಉಚಿತವಾಗಿಯೇ ನೀಡುತ್ತಿದೆ. ಹೀಗಿರುವಾಗ ನಾಗರಿಕರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯುವುದು ಒಂದು ಆಯ್ಕೆಯೇ ಹೊರತು, ಕಡ್ಡಾಯವಲ್ಲ. ಹಣವಿದ್ದವರು ತಮ್ಮ ಅನುಕೂಲಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಬಹುದು ಎಂದು ಹೇಳಿರುವ ಭಾರತ್ ಬಯೋಟೆಕ್, ನಮ್ಮ ಸಂಸ್ಥೆಯಲ್ಲಿ ಕೊರೋನಾ ರೂಪಾಂತರಿ ವೈರಸ್ಗಳ ವಿರುದ್ಧ ಹೋರಾಡುವ ಲಸಿಕೆಗಳ ಅಭಿವೃದ್ಧಿ ಕೆಲಸವೂ ನಡೆಯುತ್ತಿದೆ. ಹೀಗಾದಾಗ ಸಹಜವಾಗಿ ಕೊವ್ಯಾಕ್ಸಿನ್ ಉತ್ಪಾದನೆ ಮೇಲೆ ಪ್ರಭಾವ ಬೀರುತ್ತದೆ. ಇದು ನಮಗೆ ನಷ್ಟ ಉಂಟು ಮಾಡುವ ಸಂಗತಿ. ಹಾಗಾಗಿ ಗಣನೀಯವಾಗಿ ಉತ್ಪಾದನಾ ವ್ಯವಸ್ಥೆ ಮಾಡಬೇಕು ಎಂದೂ ಹೇಳಿದೆ.
ಕೊವ್ಯಾಕ್ಸಿನ್ ಲಸಿಕೆ ಅಭಿವೃದ್ಧಿ, ಕ್ಲಿನಿಕಲ್ ಟ್ರಯಲ್ಗಳು ಮತ್ತು ಲಸಿಕೆ ತಯಾರಿಕೆಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನಮ್ಮದೇ ಸಂಪನ್ಮೂಲಗಳಿಂದ 500 ಕೋಟಿ ರೂ.ಗೂ ಹೆಚ್ಚು ಹಣ ಹೂಡಿಕೆ ಮಾಡಿದ್ದೇವೆ ಎಂದೂ ಭಾರತ್ ಬಯೋಟೆಕ್ ತಿಳಿಸಿದೆ.