Tuesday, August 16, 2022

Latest Posts

150 ವರ್ಷಗಳ ಹಿಂದಿನ ಬಲಿದಾನ ಮರೆಯಬಾರದು: ಹೊಸದಿಗಂತ ಪತ್ರಿಕೆಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಪ್ರಕಾಶ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಕೇವಲ 27 ವರ್ಷಗಳ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಹೇಳುತ್ತ 150 ವರ್ಷಗಳ ಸಂಗ್ರಾಮ, ಲಕ್ಷಾಂತರ ಜನರ ಬಲಿದಾನವನ್ನು ಮರೆತರೆ ಕೃತಘ್ನ ಹಾಗೂ ಘಾತುಕಕಾರಿ ಎಂದು ಹೊಸದಿಗಂತ ಪತ್ರಿಕೆಯ ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಪ್ರಕಾಶ್ ಅಭಿಪ್ರಾಯಪಟ್ಟರು.
ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಅಮೃತ ಮಹೋತ್ಸವ ಅಂಗವಾಗಿ ನಗರದ ಸಾಯಿ ಮಧುವನ ಬಡಾವಣೆಯ ಸಮರ್ಪಣಾ ಟ್ರಸ್ಟ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂಗ್ರಾಮ ದರ್ಶನ-01 ಕಾರ್ಯಕ್ರಮವದಲ್ಲಿ ವಕ್ತಾರರಾಗಿ ಮಾತನಾಡಿದರು.
ಜನಸಾಮಾನ್ಯರಲ್ಲಿ ಬ್ರಿಟೀಷರ ವಿರುದ್ಧ ಕಿಡಿಯನ್ನು ಹೊತ್ತಿಸಿ ಸ್ವಾತಂತ್ರ್ಯವನ್ನು ನಮ್ಮ ಮಡಿಲಿಗೆ ತಂದುಕೊಟ್ಟ ಘಟನೆ ಸಣ್ಣದಲ್ಲ. ಆದರೆ ಕೇವಲ ಅಸಹಾಕಾರ ಆಂಧೋಲನದಿಂದ, ಶಾಂತಿಯ ಸಂಗ್ರಾಮದಿಂದ ಸ್ವಾಂತಂತ್ರ್ಯ ಲಭಿಸಿದೆ ಎಂದು ಹೇಳಿದರೆ, ಅದರ ಹಿಂದೆ ಸುಮಾರು 150 ವರ್ಷಗಳ ಕಾಲ ನಡೆದ ಹೋರಾಟ, ಲಕ್ಷಾಂತರ ಜನರ ಬಲಿದಾನವನ್ನು ಮರೆತಂತಾಗುತ್ತದೆ ಎಂದರು.
ಸನ್ಯಾಸಿಗಳಿಂದ ಹಿಡಿದು ತಾಯಂದಿರು, ಮಕ್ಕಳು, ಹಿರಿಯರು ಹೋರಾಟ ಮಾಡಿರುವ ಸಾವಿರಾರು ನಿದರ್ಶನಗಳು ಇವೆ. ಸ್ವಾಮಿ ವಿವೇಕಾನಂದರು ಜಗತ್ತನ್ನು ಸುತ್ತಿ ದೇಶಕ್ಕೆ ನವೋತ್ಥಾನವನ್ನು ತಂದು ಕೊಟ್ಟು ಭಾರತವನ್ನು ಇಡೀ ವಿಶ್ವ ಗೌರವದಿಂದ ನೋಡುವಂತೆ ಮಾಡಿದ್ದರು ಎಂದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಗಾ ಸಾಧುಗಳು ಸಹ ಪಥಸೃಷ್ಠಿಕರ್ತರಾಗಿದ್ದರು. ಬಾಲಗಂಗಾಧರನಾಥ ತಿಲಕರು ದೇಶದ ಜನರನ್ನು ಒಗ್ಗೂಡಿಸಲು ಗಣೇಶನನ್ನು ರಸ್ತೆ, ಮೈದಾನಕ್ಕೆ ತಂದು ಜಾತಿ, ಭಾಷೆ, ಮೇಲು, ಕೀಳು, ಸ್ಪ್ರಶ್ಯ ಅಸ್ಪ್ರಶ್ಯ , ಶ್ರೀಮಂತ ಬಡವರೆನ್ನದೆ ಎಲ್ಲರನ್ನೂ ಬ್ರಿಟೀಷರ ವಿರುದ್ಧ ಒಟ್ಟು ಸೇರಿಸಿದ್ದರು. ಇದನ್ನೆಲ್ಲ ಮರೆತರೆ ನಿಜವಾದ ಹೋರಾಟಗಾರರಿಗೆ ಗೌರವ ಕೊಟ್ಟಂತಾಗುವುದಿಲ್ಲ ಎಂದು ಹೇಳಿದರು.
ವಾಸುದೇವ ಪಳಕೆ ಬ್ರಿಟೀಷರ ವಿರುದ್ಧ ಸ್ವತಃ ಸಶಸ್ತ್ರ ಹೋರಾಟಕ್ಕೆ ಮುನ್ನುಡಿ ಬರೆದವರು, ಅವರೊಂದಿಗೆ ಬಂಗಾಳ ಹಾಗೂ ಮಹಾರಾಷ್ಟ್ರದ ಕ್ರಾಂತಿಕಾರರ ದೊಡ್ಡ ಪಟ್ಟಿಯನ್ನೇ ನಾವು ಮರೆತಿದ್ದೇವೆ. ಭೂಗತರಾಗಿ ಬ್ರಿಟೀಷರ ಆಳ್ವಿಕೆ ವಿರುದ್ಧ ಸೆಡ್ಡು ಹೊಡೆದವರು ಸಾವಿರಾರು ಮಂದಿ. ಇಂತಹ ಪ್ರಮುಖರಲ್ಲೊಬ್ಬರಾದ ವೀರ ಸಾವರ್ಕರ್ ಅವರ ಹೆಸರಿನ ಮುಂದೆ ಕೆಲವರು ಹೇಡಿ ಎಂದು ಸೇರಿಸುತ್ತಾರೆ. ಇದು ಅತ್ಯಂತ ದುಃಖದ ಸಂಗತಿ ಎಂದು ವಿಷಾಧಿಸಿದರು.
ಇತಿಹಾಸ ಗೊತ್ತಿಲ್ಲದವರ ರೀತಿ ನಮ್ಮನ್ನೆಲ್ಲ ನಿಂದಿಸುವ ಸಲುವಾಗಿ ಹೋರಟಗಾರರ್ನು ನಿಂದಿಸುತ್ತಾರೆ. ಚರಿತ್ರೆಯನ್ನು ಓದಿದರೆ ಸಾವರ್ಕರ್‍ರನ್ನು ಯಾವ ಅರ್ಥದಲ್ಲೂ ಹೇಡಿ ಎಂದು ಕರೆಯಲು ಸಾಧ್ಯ? ತಲೆಯನ್ನು ಮಾತ್ರ ಹೊರಹಾಕಲು ಸಾಧ್ಯವಿರುವ ಹಡಗಿನ ಒಂದು ಸಣ್ಣ ಕಿಂಡಿಯಲ್ಲಿ ತನ್ನ ಇಡೀ ಶರೀರವನ್ನು ತೂರಿಸಿ. ಗಾಜಿನ ಚೂರುಗಳು ತಗುಲಿ ಮೈಯೆಲ್ಲ ರಕ್ಷ ಜಿನುಗುತ್ತಿದ್ದರೂ, ಸಮುದ್ರಕ್ಕೆ ಧುಮುಕಿ ಫ್ರಾನ್ಸ್‍ಗೆ ಈಜಿಕೊಂಡು ಹೋದವರು ಸಾವರ್ಕರ್ ಅವರು. ಅವರನ್ನು ಬ್ರಿಟೀಷರು ಮತ್ತೆ ಬಂದಿಸಿದ ಕಾರಣಕ್ಕೆ ಫ್ರಾನ್ಸ್ ಅಧ್ಯಕ್ಷ ರಾಜೀನಾಮೆ ನೀಡಬೇಕಾಯಿತು ಎಂದು ಹೇಳಿದರು.
ಚಂದ್ರಶೇಖರ್ ಆಜಾದ್, ಭಗತ್ ಸಿಂಗ್ ಅಂತಹ ವೀರರನ್ನು ಮರೆತು ಸ್ವಾತಂತ್ರ್ಯವನ್ನು ನೆನಪಿಸಿಕೊಳ್ಳುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದ ಅವರು, ಇಂತಹ ಪ್ರತಿ ಹೋರಾಟಗಾರರನ್ನೆಲ್ಲ ನೆನಪಿಸಿಕೊಳ್ಳುವ ಪ್ರಯತ್ನ ಮುಂದಿನ 11 ತಿಂಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.
ವಂದೇ ಮಾತರಂ ಎನ್ನುವ ಸ್ವಾತಂತ್ರ್ಯ ಮಂತ್ರ ಬರೆದ ಬಂಕಿಮ ಚಂದ್ರರು ಈ ಮಂತ್ರವು ಇಡೀ ದೇಶವನ್ನು ಜೋಡಿಸುತ್ತದೆ ಎಂದಿದ್ದರು. ಅವರು ಹೇಳಿದಂತೆ ಈ ಮಂತ್ರವು ಸ್ವಾತಂತ್ರ್ಯದ ಕಿಡಿಯನ್ನು ಹೊತ್ತಿಸಿ ಬ್ರಿಟೀಷರನ್ನು ಓಡಿಸುವ ರಣಘೋಷವಾಯಿತು ಇದನ್ನೆಲ್ಲ ನೆನಪಿಸಿಕೊಳ್ಳಬೇಕಲ್ಲವೇ ಎಂದರು.
300 ರಿಂದ 400 ವರ್ಷಗಳ ಕಾಲ ಮೊಗಲರು ನಮ್ಮ ದೇಶದ ಸಂಸ್ಕøತಿಯನ್ನು ಹಾಳುಮಾಡಿದರು. ದೇವಸ್ಥಾನಗಳನ್ನು ಒಡೆದರು, ವಿಶ್ವವಿದ್ಯಾಲಯಗಳನ್ನು ನಾಶ ಮಾಡಿದರು, ಮಠ ಮಂದಿರಗಳು, ತಾಯಂದಿರ ನಾಶ ಅವರ ಗುರಿಯಾಗಿತ್ತು. ಆಗಲೇ ವೀರ ಛತ್ರಪತಿ ಶಿವಾಜಿ ಹುಟ್ಟಿಕೊಂಡ ಇಡೀ ಮೊಗಲರ ಸಾಮ್ರಾಜ್ಯ ಕುಸಿಯಲು ಕಾರಣನಾದ ಎಂದರು.
1683 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಭಾರತಕ್ಕೆ ಕಾಲಿಟ್ಟು 1800 ರರವರೆಗೆ ತಕ್ಕಡಿ, ಟೋಪಿ ಹಿಡಿದು ದೇಶವನ್ನು ದೋಚುವುದು ಹೇಗೆಂದು ಅಧ್ಯಯನ ನಡೆಸಿದ್ದರು. 1818 ರಲ್ಲಿ ಪ್ಲಾಸಿ ಕದನವನ್ನು ನಾವು ಸೋತ ನಂತರ ಸುಮಾರು 39 ವರ್ಷಗಳ ಕಾಲ ಬ್ರಿಟೀಷರಿಂದ ಇನ್ನಿಲ್ಲದ ಅತ್ಯಾಚಾರ ನಡೆಯಿತು. ಅವರು ಕೇವಲ ಸಾಮ್ರಾಜ್ಯ ವಿಸ್ತಾರ ಮಾಡಿಕೊಳ್ಳಲು ಬಂದವರಾಗಿರಲಿಲ್ಲ. ಸುಭಿಕ್ಷವಾದ ಪರಂಪರೆ, ಸಂಸ್ಕøತಿಯನ್ನು ನಾಶ ಮಾಡಲು ಪ್ರಯತ್ನ ಮಾಡಿದ್ದರು ಎಂದರು.
ರಂಗಬಾಹು, ಅಮಾನುಲ್ಲಾ ಖಾನ್‍ರ ಹೋರಾಟ, ತ್ಯಾಗ, ಸಿಪಾಯಿ ದಂಗೆ ಘಟನೆ, ಝಾನ್ಸಿರಾಣಿ ಲಕ್ಷ್ಮೀಬಾಯಿ, ತಾತ್ಯಾಟೋಪೆ ಇನ್ನಿರೆ ವೀರರ ಚರಿತ್ರೆ ಕುರಿತು ಮಾತನಾಡಿದ ಅವರು, ಇಂತಹ ವೀರರನ್ನು ಸದಾ ನೆನಪಿಸಿಕೊಳ್ಳಬೇಕು ಎಂದರು.
ಇಂದಿನ ಪ್ರಧಾನಮಂತ್ರಿಗಳ ಸಿಂಹಾಸನ ರತ್ನಖಚಿತವಾದದ್ದಲ್ಲ. ಲಕ್ಷಾಂತರ ಜನರ ರಕ್ತ, ಮಾಂಸ, ಮೂಳೆಗಳ ಅಡಿಪಾಯ ಅದಕ್ಕಿದೆ. ಹಿಂದೆ ಆಫ್ಘಾನಿಸ್ತಾನ ನಮ್ಮ ಭಾಗವಾಗಿತ್ತು. ಪಾಕಿಸ್ಥಾನ, ಬಾಂಗ್ಲಾ, ನೇಪಾಳ, ಶ್ರೀಲಂಕ, ಟಿಬೆಟ್ ಸಹ ನಮ್ಮಿಂದ ಬಿಟ್ಟು ಹೋಯಿತು. ಇದೆಲ್ಲವೂ ಒಗ್ಗೂಡಿದ ಅಖಂಡ ಭಾರತ ಮತ್ತೆ ಸಿಗಲೇ ಬೇಕು. ತ್ರಿಖಂಡಗಳು ಮತ್ತೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಒಂದಾಗಬೇಕು. ಆರ್‍ಎಸ್‍ಎಸ್ ಸಹೋದರತ್ವ ನೀತಿ ಹೊಂದಿದೆ. ಹಿಂದೂಗಳು ಒಂದಾಗಿ ನಿಲ್ಲಬೇಕೆಂದು ಕೆಲಸ ಮಾಡುತ್ತಿದೆ ಎಂದರು.
ದೇಶದ ಆರೂವರೆ ಲಕ್ಷ ಗ್ರಾಮಗಳಲ್ಲಿ ಭಾರತಮಾತಾಕಿ ಜೈ ಕೇಳಿಬರಬೇಕು. ಅವರು ಯಾರಾದರೂ ಆಗಿರಬಹುದು ಅವರ ಲಕ್ಷ್ಯ ರಾಷ್ಟೀಯತೆ ಕಡೆಗಿರಬೇಕು ಎಂದರು.
ಸಮರ್ಪಣಾ ಟ್ರಸ್ಟ್‍ನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್‍ಎಸ್‍ಎಸ್ ನಗರ ಸಂಘಚಾಲಕರಾದ ಸ.ಗಿರಿಜಾ ಶಂಕರ್ ಅಭ್ಯಾಗತರಾಗಿ ಭಾಗವಹಿಸಿದ್ದರು. ಜಿಲ್ಲಾ ಬೌದ್ಧಿಕ ಪ್ರಮುಖ್ ಪ್ರವೀಣ್ ನಿರೂಪಿಸಿದರು. ಸಮರ್ಪಣಾ ಟ್ರಸ್ಟ್ ಖಜಾಂಚಿ ರಾಜಾರಾಂ ಕೋಟೆ ಸ್ವಾಗತಿಸಿದರು. ಟ್ರಸ್ಟ್‍ನ ವಿಶ್ವಸ್ಥರಾದ ಅಶೋಕ್ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss