ನೇರ ತೆರಿಗೆ ವಸೂಲಾತಿಯಲ್ಲಿ 17ಶೇಕಡಾ ಏರಿಕೆ: 13.73 ಲಕ್ಷ ಕೋಟಿ ರೂ. ಸಂಗ್ರಹ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಸಕ್ತ ಹಣಕಾಸು ವರ್ಷವಾದ 2022-23 ರಲ್ಲಿ ಇಲ್ಲಿಯವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹದಲ್ಲಿ 17 ಶೇಕಡಾ ಏರಿಕೆಯಾಗಿದ್ದು ಮರುಪಾವತಿಗಳ ನಂತರ ಒಟ್ಟಾರೆಯಾಗಿ 13.73 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಇದು ಪೂರ್ಣಹಣಕಾಸು ವರ್ಷದ ಪರಿಷ್ಕೃತ ಗುರಿಯ 83 ಶೇಕಡಾದಷ್ಟು ಸಂಗ್ರಹವಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ತಿಳಿಸಿದೆ. ಈ ಸಂಗ್ರಹವು ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) ಮತ್ತು ಕಾರ್ಪೊರೇಟ್ ತೆರಿಗೆಗಳನ್ನು ಒಳಗೊಂಡ ಮೊತ್ತವಾಗಿದೆ.

“ಮಾರ್ಚ್ 10, 2023 ರವರೆಗಿನ ನೇರ ತೆರಿಗೆ ಸಂಗ್ರಹಣೆಗಳ ತಾತ್ಕಾಲಿಕ ಅಂಕಿಅಂಶಗಳು ಸ್ಥಿರವಾದ ಬೆಳವಣಿಗೆಯನ್ನು ದಾಖಲಿಸಿವೆ. ನೇರ ತೆರಿಗೆ ಒಟ್ಟು ಸಂಗ್ರಹಗಳು 16.68 ಲಕ್ಷ ಕೋಟಿ ರೂಪಾಯಿಗಳಾಗಿವೆ. ಇದು ಕಳೆದ ವರ್ಷದ ಇದೇ ಅವಧಿಯ ಒಟ್ಟು ಸಂಗ್ರಹಣೆಗಿಂತ 22.58 ಶೇಕಡಾಷ್ಟು ಹೆಚ್ಚಾಗಿದೆ” ಎಂದು CBDT ಹೇಳಿಕೆಯಲ್ಲಿ ತಿಳಿಸಿದೆ. ಮರುಪಾವತಿಯ ನಂತರ ಒಟ್ಟಾರೆ ಸಂಗ್ರಹವು 13.73 ಲಕ್ಷ ಕೋಟಿ ರೂ.ಗಳಷ್ಟಿದ್ದು ಇದು ಕಳೆದ ವರ್ಷದ ಇದೇ ಅವಧಿಗಿಂತ 16.78 ಶೇಕಡಾ ಹೆಚ್ಚಾಗಿದೆ.

ಕಾರ್ಪೋರೇಟ್‌ ತೆರಿಗೆ ಆದಾಯದಲ್ಲಿ 18.08 ಶೇಕಡಾ ಬೆಳವಣಿಗೆಯಾಗಿದ್ದು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ 27.57 ಶೇಕಡಾ ಏರಿಕೆಯಾಗಿದೆ. 2.95 ಲಕ್ಷ ಕೋಟಿ ಮೊತ್ತದ ಮರುಪಾವತಿಗಳನ್ನು ಏಪ್ರಿಲ್ 1, 2022 ರಿಂದ ಮಾರ್ಚ್ 10, 2023 ರವರೆಗೆ ನೀಡಲಾಗಿದೆ, ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ನೀಡಲಾದ ಮರುಪಾವತಿಗಳಿಗಿಂತ 59.44 ಶೇಕಡಾ ಹೆಚ್ಚಾಗಿದೆ.

ಸಾಮಾನ್ಯವಾಗಿ ಮಾರ್ಚ್‌ ತಿಂಗಳು ಹಣಕಾಸು ವರ್ಷದ ಹಾಗು ತ್ರೈಮಾಸಿಕದ ಅಂತ್ಯ ಸಮಯವಾಗಿರುವುದರಿಂದ ಈ ತಿಂಗಳಲ್ಲಿನ ತೆರಿಗೆ ಸಂಗ್ರಹವು ಗಣನೀಯವಾಗಿ ಏರಿಕೆಯಾಗಲಿದ್ದು ತಿಂಗಳ ಅಂತ್ಯದ ವೇಳೆಗೆ ಪರಿಷ್ಕೃತ ನೇರ ತೆರಿಗೆ ಸಂಗ್ರಹ ಗುರಿ 16.5 ಲಕ್ಷ ಕೋಟಿ ರೂ.ಗಳನ್ನು ತಲುಪಬಹುದು ಎಂದು ಸರ್ಕಾರ ಅಂದಾಜಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!