ಮುಂಬೈ: ನನ್ನ ಮಗ ಸಾಯುವ ಮುನ್ನ 170 ಪ್ರಯಾಣಿಕರ ಪ್ರಾಣಗಳನ್ನು ಉಳಿಸಿದ್ದಾನೆ. ಇದೇ ನಮಗೆ ಹೆಮ್ಮೆಯ ವಿಚಾರ. ನಾನು ಸೇನಾಪಡೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತನಾದವನು. ನನ್ನೀರ್ವರು ಪುತ್ರರೂ ನನ್ನ ಹಾದಿಯನ್ನೇ ಹಿಡಿದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇದಕ್ಕಿಂತ ದೊಡ್ಡ ಆತ್ಮತೃಪ್ತಿ ಬೇರೆ ಇದೆಯೇ ? ಕೊರೋನಾ ಬಗ್ಗೆ ಜಾಗ್ರತೆ ವಹಿಸುವಂತೆ ಪುತ್ರ ಕ್ಯಾ.ದೀಪಕ್ ಸಾಥೆ ಕಳೆದ ಬಾರಿ, ಮಾರ್ಚ್ನಲ್ಲಿ ಮನೆಗೆ ಬಂದಾಗ ಎಚ್ಚರಿಸಿ ಹೋಗಿದ್ದ. ಆದರೆ ವಿಧಿಯಾಟ ಬೇರೆಯೇ ಆಯಿತು …ಹೀಗೆನ್ನುವಾಗ ದೀಪಕ್ ತಂದೆ ನಿವೃತ್ತ ಕರ್ನಲ್ ವಸಂತ್ ಸಾಥೆ ಮತ್ತು ತಾಯಿ ನೀಲಾರ ಕಂಠಗಳು ಬಿಗಿದುಬಿಟ್ಟವು. ಸ್ವರ ಭಾವೋದ್ವೇಗದಿಂದ ನಡುಗಿತು.
ಹುತಾತ್ಮ ಪೈಲಟ್ ಕ್ಯಾ.ದೀಪಕ್ ತಾಯಿ ಹೇಳುವಂತೆ, ಮಗ ದೀಪಕ್ ಬಹಳ ಬುದ್ಧಿವಂತ, ಪ್ರತಿಯೊಂದು ರಂಗದಲ್ಲೂ ಅದು ವಿಮಾನ ಹಾರಾಟವಿರಲಿ, ವಾಹನ ಚಾಲನೆಯಿರಲಿ, ಈಜು ಹೀಗೆ ಪ್ರತಿಯೊಂದರಲ್ಲೂ ಟಾಪರ್. ಮಗನಿಗೆ ‘ಸ್ವೋರ್ಡ್ ಆಫ್ ಆನರ್’ ನೀಡಿ ಗೌರವಿಸಿದ್ದಾರೆ. ದುಂಡಿಗಲ್ನ ಐಎಎಫ್ ಅಕಾಡೆಮಿಯಿಂದ ಬರೋಬ್ಬರಿ 8 ಪ್ರಶಸ್ತಿಗಳನ್ನು ಪಡೆದ ಕೀರ್ತಿ ದೀಪಕ್ನದು. ಯಾವುದೇ ರಂಗದಲ್ಲೂ ಮುಂಚೂಣಿ ಸಾಧನೆ ಮಾಡುವ ದೀಪಕ್ ಸಾಧಕ ಅಧಿಕಾರಿ ಕೂಡ ಎಂದು ಹೆಮ್ಮೆ ವ್ಯಕ್ತಪಡಿಸುತ್ತಾರೆ ಧನ್ಯ ತಾಯಿ ನೀಲಾ. ದೀಪಕ್ಗೆ ವಿಮಾನ ಹಾರಾಟ ರಂಗದಲ್ಲಿನ ಅನುಭವ ಕೂಡ ಬರೋಬ್ಬರಿ 36 ವರ್ಷಗಳದ್ದು ಎಂದು ಇವರ ಸೋದರ ಸಂಬಂಧಿ ನೀಲೇಶ್ ಸಾಥೆ ನೆನಪಿಸುತ್ತಾರೆ.
ಕ್ಯಾ.ದೀಪಕ್ ಸಹೋದರ ವಿಕಾಸ್ ಸಾಥೆ ಕೂಡ ಸೇನೆಯಲ್ಲಿದ್ದವರು. ಜಮ್ಮು ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದವರು. ಈ ವೀರಪುತ್ರರ ವಯೋವೃದ್ಧ ಹೆತ್ತವರು ನಾಗಪುರದ ಭರತ್ನಗರ ಬಡಾವಣೆಯಲ್ಲಿ ನೆಲೆಸಿದ್ದಾರೆ. ದೀಪಕ್ ಸಾಥೆ ಮುಂಬೈನ ಚಾಂದಿವಿಲಿ ಬಡಾವಣೆಯಲ್ಲಿ ವಾಸ್ತವ್ಯದಲ್ಲಿದ್ದರು. ತಾಯಿಯ 84ನೇ ಹುಟ್ಟುಹಬ್ಬ ಆಚರಿಸಲು ನಾಗಪುರಕ್ಕೆ ದಿಢೀರ್ ಭೇಟಿ ಕೊಡುವ ಕನಸು ಕಂಡಿದ್ದ ದಿಟ್ಟ ಕ್ಯಾ.ದೀಪಕ್ರನ್ನು ವಿಧಿ ಮಾತ್ರ ಸದ್ದಿಲ್ಲದೆ ಬೇರೆಯೇ ಲೋಕಕ್ಕೆ ಸೆಳೆದೊಯ್ದಿದೆ.
ಮುಂದಿನ ತಿಂಗಳು ಅಪ್ಪನಾಗಲಿದ್ದರು ಕ್ಯಾ.ಕುಮಾರ್ ಅಖಿಲೇಶ್
ಸಹ ಪೈಲಟ್ ಕ್ಯಾ.ಕುಮಾರ್ ಅಖಿಲೇಶ್ ಕೂಡ ದುರಂತದಲ್ಲಿ ಮೃತಪಟ್ಟಿದ್ದಾರೆ. 32 ವರ್ಷದ ಸಹ ಪೈಲಟ್ ಕ್ಯಾ.ಕುಮಾರ್ ಅಖಿಲೇಶ್ ಮೂಲತ: ದೇಗುಲ ನಗರಿ ಮಥುರಾದವರು. ಡಿಸೆಂಬರ್ನಲ್ಲಿ ವಿವಾಹವಾಗಿದ್ದ ಅವರು ಮುಂದಿನ ತಿಂಗಳು ತಂದೆಯಾಗುವವರಿದ್ದರು . ಆದರೆ ದೈವೇಚ್ಛೆ ಬೇರೆಯೇ ಆಯಿತು.
ಅಖಿಲ್ ಎಂದೇ ಪರಿಚಿತ ಕ್ಯಾ.ಅಖಿಲೇಶ್ ಮೇ 8ರಂದು ಕೋಝಿಕ್ಕೋಡ್ಗೆ ಬಂದಿಳಿದ ವಂದೇ ಭಾರತ್ ವಿಮಾನದಲ್ಲೂ ಪೈಲಟ್ ಆಗಿದ್ದರು. ಈ ಪೈಲಟ್ನ ಮನೆಯೂ ಶೋಕ ಸಾಗರದಲ್ಲಿ ಮುಳುಗಿದೆ.