Wednesday, June 29, 2022

Latest Posts

18 ತಿಂಗಳೊಳಗೆ ಗೊಂದಿ ನೀರಾವರಿ ಯೋಜನೆ ಮೂಲಕ ಮಾದರಸನ ಕೆರೆ, ದಾಸರಹಳ್ಳಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಗೊಂದಿ ನೀರಾವರಿ ಯೋಜನೆ ಮೂಲಕ ತಾಲ್ಲೂಕಿನಲ್ಲಿ ಬೈರಾಪುರ ಪಿಕಪ್‍ನಿಂದ ಮಾದರಸನ ಕೆರೆ ಹಾಗೂ ದಾಸರಹಳ್ಳಿ ಕೆರೆಗಳಿಗೆ ಮುಂದಿನ 18 ತಿಂಗಳೊಳಗಾಗಿ ನೀರು ತುಂಬಿಸುವ ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಮಾಜಿ ಸಚಿವ ಸಿ.ಟಿ ರವಿ ಹೇಳಿದರು.
ರಾಜ್ಯ ಸರ್ಕಾರ ಗೊಂದಿ ನೀರಾವರಿಗೆ ಯೋಜನೆ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಲಕ್ಯಾ ಹೋಬಳಿ ಗ್ರಾಮಸ್ಥರು ಸಲ್ಲಿಸಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಜಿಲ್ಲೆಯ ಬಯಲುಸೀಮೆ ಪ್ರದೇಶದ ಜನರ ಬಹುದಿನಗಳ ಕನಸು ಗೋದಿ ಯೋಜನೆ, ಭದ್ರಾ ಜಲಾಶಯದಿಂದ 197 ಕೆರೆಗಳಿಗೆ ನೀರು ತುಂಬಿಸುವ 1281.8 ಕೋಟಿ ರೂ.ನ ಯೋಜನೆ ಇದಾಗಿದೆ. ರಾಜ್ಯ ಸಚಿವ ಸಂಪುಟದಲ್ಲಿ ಇದಕ್ಕೆ ಅನುಮೋದನೆ ದೊರಕಿದ್ದು, ಇದೇ ಯೋಜನೆಯಡಿ ಚಿಕ್ಕಮಗಳೂರು ತಾಲ್ಲೂಕು ಲಕ್ಯಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮಾದರಸನ ಕೆರೆ ಹಾಗೂ ದಾಸರಹಳ್ಳಿ ಕೆರೆಗೆ ಬೈರಾಪುರ ಪಿಕಪ್‍ನಿಂದ ನೀರು ಒದಗಿಸುವ ಯೋಜನೆಗೆ ಟೆಂಡರ್ ಕರೆಯಲಾಗಿದೆ ಎಂದರು.
ನವೆಂಬರ್ 27 ಟೆಂಡರ್ ಪ್ರಕ್ರಿಯೆ ಮುಗಿಯಲಿದ್ದು ಮುಂದಿನ 18 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ನೀರಾವರಿ ಸಮಿತಿ ಅಧ್ಯಕ್ಷ ಎಲ್.ಆರ್ ಈಶ್ವರಪ್ಪ ಮಾತನಾಡಿ, ಬಯಲು ಸೀಮೆ ಜನರಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆಗೆ ಸಿ.ಟಿ ರವಿ ಅವರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿಸಿಕೊಟ್ಟಿರುವುದು ಈ ಭಾಗದ ರೈತರಿಗೆ ಹರ್ಷದಾಯಕ ವಿಷಯ ಎಂದರು.
ಈ ಕೆರೆಗಳನ್ನು ತುಂಬಿಸುವುದರಿಂದ ಚಿಕ್ಕಮಗಳೂರು ತಾಲ್ಲೂಕಿನ ಹಿರೇಗೌಜ, ಲಕುಮನಹಳ್ಳಿ, ಲಕ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾಗದ ಜನರಿಗೆ ಹಾಗೂ ಸಖರಾಯಪಟ್ಟಣ ಭಾಗದ ಹಳ್ಳಿಗಳಿಗೂ ಅನುಕೂಲವಾಗಲಿದ್ದು ಮಾದರಸ ಕೆರೆಗೆ ಒಟ್ಟು ರೂ. 17 ಕೋಟಿ ಹಾಗೂ ದಾಸರಹಳ್ಳಿ ಕೆರೆಯ ಕಾಮಗಾರಿಗೆ ರೂ. 11 ಕೋಟಿ ಅನುದಾನ ಬಿಡುಗಡೆಯಾಗಿದೆ ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಆರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜೆ ಸೋಮಶೇಖರಪ್ಪ, ಜಿ.ಪಂ ಸದಸ್ಯ ರವೀಂದ್ರ ಬೆಳವಾಡಿ, ವೀರಭದ್ರಪ್ಪ, ದಿನೇಶ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss