ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ಮಡಿಕೇರಿ:
ಕೋವಿಡ್ ಮೂರನೇ ಅಲೆ ಬರದಂತೆ ನೋಡಿಕೊಳ್ಳುವಲ್ಲಿ 18ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಪಡೆಯಬೇಕು. ಆ ದಿಸೆಯಲ್ಲಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಮನವಿ ಮಾಡಿದ್ದಾರೆ. ಜಿಲ್ಲೆಯ ಮಾಲ್ದಾರೆ ಬಳಿಯ ಚೆನ್ನಂಗಿ ಬಸವನಹಳ್ಳಿ ಆಶ್ರಮ ಶಾಲೆಯಲ್ಲಿ ಆದಿವಾಸಿ ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೋವಿಡ್ ಲಸಿಕೆ ಪಡೆಯುವುದರಿಂದ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ, ಆದ್ದರಿಂದ ತಪ್ಪು ಕಲ್ಪನೆಯಿಂದ ಆದಿವಾಸಿ ಜನರು ಹೊರಬರಬೇಕು. ಚೆನ್ನಂಗಿ ಬಸವನಹಳ್ಳಿ ವ್ಯಾಪ್ತಿಯಲ್ಲಿ 255 ಕ್ಕೂ ಹೆಚ್ಚು ಜನರು ಲಸಿಕೆ ಪಡೆಯಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ. ಆ ದಿಸೆಯಲ್ಲಿ ವೀರಾಜಪೇಟೆ ತಾಲೂಕಿನ ಎಲ್ಲಾ ಹಾಡಿಗಳನ್ನು ಕೊರೋನಾ ಮುಕ್ತ ಮಾಡಬೇಕು ಎಂದು ಅವರು ಕೋರಿದರು. ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಹಾಗೂ ಆಗಾಗ ಕೈತೊಳೆದುಕೊಳ್ಳಬೇಕು. ಜ್ವರ, ಕೆಮ್ಮು, ನೆಗಡಿ, ಮೈಕೈನೋವು ಹೀಗೆ ಹಲವು ರೀತಿಯ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ ತೆರಳಿ ವೈದ್ಯರನ್ನು ಭೇಟಿ ಮಾಡಬೇಕು ಎಂದು ಸಲಹೆ ಮಾಡಿದರು.
ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ ಹಿಂದೆ ಆದಿವಾಸಿಗಳು ಸ್ಥಳೀಯವಾಗಿ ದೊರೆಯುವ ಗೆಡ್ಡೆಗೆಣಸು ಉಪಯೋಗಿಸಿ ಗಟ್ಟಿಯಾಗಿದ್ದರು. ಆದರೆ ಈಗಿನ ಪರಿಸ್ಥಿತಿ ಬೇರೆಯೇ ಇದೆ. ಆದ್ದರಿಂದ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ಲಸಿಕೆ ಪಡೆಯಬೇಕು ಎಂದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಸೇರಿದಂತೆ ಜಿಲ್ಲೆಯಲ್ಲಿ ಕೊರೋನಾ ಮುಕ್ತವಾಗಬೇಕು. ಚೆನ್ನಂಗಿ ಬಸವನಹಳ್ಳಿ ಭಾಗದಲ್ಲಿನ ಆದಿವಾಸಿ ಜನರಿಗೆ ಈಗಾಗಲೇ ಅರಣ್ಯ ಹಕ್ಕುಪತ್ರ ನೀಡಲಾಗಿದ್ದು, ಸದ್ಯದಲ್ಲಿಯೇ ಆರ್ ಟಿ ಸಿ ನೀಡಲಾಗುವುದು. ಜೊತೆಗೆ ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವಲ್ಲಿ ಶಾಸಕರು ಮುಂದಾಗಿದ್ದಾರೆ ಎಂದರು.
ಚೆನ್ನಯ್ಯನಕೋಟೆ ಗ್ರಾ.ಪಂ.ಸದಸ್ಯ ಹಾಗೂ ಆದಿವಾಸಿ ಮುಖಂಡ ಜೆ.ಕೆ.ಅಪ್ಪಾಜಿ ಅವರು ಮಾತನಾಡಿ,ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನ ಎಲ್ಲಾ ಹಾಡಿಯ ಆದಿವಾದಿಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಎರಡು ತಾಲೂಕಿನ ಎಲ್ಲಾ ಹಾಡಿಗಳಿಗೆ ಶಾಸಕರು ಭೇಟಿ ನೀಡಿ ಆದಿವಾಸಿ ಜನರ ಮನವೊಲಿಸಿ ಲಸಿಕೆ ಕೊಡಿಸುತ್ತಿರುವುದನ್ನು ಯಾರೂ ಮರೆಯುವಂತಿಲ್ಲ ಎಂದು ಅಪ್ಪಾಜಿ ಅವರು ನುಡಿದರು.
ಕೋವಿಡ್ ಲಸಿಕೆ ಪಡೆಯುವುದರಿಂದ ಮದ್ಯಪಾನ ಮಾಡುವುದನ್ನು ಬಿಡಬೇಕಾಗುತ್ತದೆ ಎಂಬ ಮನೋಭಾವ ಆದಿವಾಸಿ ಜನರಲ್ಲಿದೆ. ಇದು ಹೋಗಬೇಕು. ಆದಿವಾಸಿ ಜನರ ಜೀವ ಮತ್ತು ಜೀವನ ಅತಿ ಮುಖ್ಯ, ಆ ನಿಟ್ಟಿನಲ್ಲಿ ಯೋಚಿಸಬೇಕು ಎಂದು ಅವರು ಕೋರಿದರು. ಐಟಿಡಿಪಿ ತಾಲೂಕು ಅಧಿಕಾರಿ ಗುರುಶಾಂತಪ್ಪ ಅವರು ಮಾಹಿತಿ ನೀಡಿ,ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ 79 ಹಾಡಿಗಳಿದ್ದು, 38 ಸಾವಿರ ಆದಿವಾಸಿ ಜನರಿದ್ದಾರೆ. 7 ಸಾವಿರ ಗಿರಿಜನ ಕುಟುಂಬಗಳಿಗೆ ಕೋವಿಡ್ ಲಸಿಕೆ ನೀಡುವ ಗುರಿ ಇದ್ದು, ಈಗಾಗಲೇ 29 ಹಾಡಿಯ 600 ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಚೆನ್ನಯ್ಯನಕೋಟೆ ಗ್ರಾ.ಪಂ.ಅಧ್ಯಕ್ಷೆ ಗಾಯತ್ರಿ, ಸದಸ್ಯರಾದ ಅರುಣ್ ಕುಮಾರ್, ರತನ್, ವಿಜು, ರಾಜು, ತಹಶಿಲ್ದಾರ್ ಯೋಗಾನಂದ, ತಾ.ಪಂ.ಇಒ ಅಪ್ಪಣ್ಣ, ಐಟಿಡಿಪಿ ಇಲಾಖೆ ಜಿಲ್ಲಾ ಅಧಿಕಾರಿ ಶಿವಕುಮಾರ್, ತಾಲೂಕು ಆರೋಗ್ಯಧಿಕಾರಿ ಡಾ.ಯತಿರಾಜು, ಜಿಲ್ಲಾ ಲಸಿಕಾ ಅಧಿಕಾರಿ ಡಾ.ಗೋಪಿನಾಥ್, ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್, ವೈದ್ಯಾಧಿಕಾರಿಗಳು, ಆದಿವಾಸಿ ಮುಖಂಡರು ಇದ್ದರು.