ಭಟ್ಕಳ: ಕೇವಲ ಎರಡು ದಿನದಲ್ಲಿ ಸುಮಾರು 21 ಕೊರೋನಾ ಪ್ರಕರಣಗಳು ದೃಢಪಟ್ಟಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಭಟ್ಕಳ ಪಟ್ಟಣವನ್ನೇ ಸೀಲ್ ಡೌನ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಸುನೀಲ್ ನಾಯ್ಕ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವುದರಿಂದ ಸಹಜವಾಗಿಯೇ ಜನರು ಆತಂಕಿತರಾಗಿದ್ದಾರೆ. ಸೋಂಕು ಯಾವುದೇ ಕಾರಣಕ್ಕೂ ಸಮುದಾಯಕ್ಕೆ ಹರಡದಂತೆ ಮಾಡುವುದೇ ದೊಡ್ಡ ಸವಾಲಾಗಿದ್ದು, ಪಟ್ಟಣದ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಿ ಅಧಿಕಾರಿಗಳು ಯಾರದೇ ಒತ್ತಡಕ್ಕೆ ಮಣಿಯದೇ ಲಾಕ್ಡೌನ್ ಬಿಗುಗೊಳಿಸಲು ತಿಳಿಸಿದ್ದೇನೆ ಎಂದರು.
ತಾಲೂಕು ಹಾಗೂ ಜಿಲ್ಲಾಡಳಿತದೊಂದಿಗೆ ಸಂಪರ್ಕದಲ್ಲಿದ್ದು ಭಟ್ಕಳ ಪಟ್ಟಣದಲ್ಲಿನ ಆಗು ಹೋಗುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ ಶಾಸಕರು, ಕೊರೊನಾ ಸೋಂಕು ತಡೆಯಲು ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿದ್ದು, ಜನರ ಸಹಕಾರವೂ ಅಗತ್ಯವಾಗಿದೆ.ಪಟ್ಟಣದಲ್ಲಿರುವ ಎಲ್ಲರ ಆರೋಗ್ಯ ಸರ್ವೆ ನಡೆಸಲಾಗುತ್ತಿದ್ದು ಪ್ರತಿಯೊಬ್ಬರೂ ಸಮರ್ಪಕ ಮಾಹಿತಿ ನೀಡುವಂತೆ ಶಾಸಕರು ಮನವಿ ಮಾಡಿಕೊಂಡಿದ್ದಾರೆ.