ಪ್ರಧಾನಿ ಮೋದಿ ಭೇಟಿಗೆ ಮುನ್ನ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಗುಂಡಿನ ಸದ್ದು: ಇಬ್ಬರು ಉಗ್ರರ ಹತ್ಯೆ, ಒರ್ವ ಯೋಧ ಹುತಾತ್ಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಶುಕ್ರವಾರ ಮುಂಜಾನೆ ಜಮ್ಮುವಿನ ಸೇನಾ ನೆಲೆಯ ಬಳಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಭೀಕರ ಗುಂಡಿನ ಕಾಳಗ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರರನ್ನು ಹತ್ಯೆಗೈಯ್ಯಲಾಗಿದೆ. ಈ ವೇಳೆ ಒಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು ನಾಲ್ವರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾಮಂತ್ರಿಗಳು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಲು ಎರಡೇ ದಿನಗಳು ಬಾಕಿ ಉಳಿದಿರುವಾಗಲೇ ಈ ಪ್ರದೇಶದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.
ಜಮ್ಮು ನಗರದ ಸುಂಜ್ವಾನ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಪಡೆದ ಭದ್ರತಾ ಪಡೆಗಳು ಮುಂಜಾನೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಈ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಯ 15 ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡರು. ತಕ್ಷಣವೇ ತೀವ್ರ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು ಎನ್‌ ಕೌಂಟರ್‌ ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿವೆ. ಸುಂಜ್ವಾನ್‌ ಪ್ರದೇಶದಲ್ಲಿ ಅಡಗಿದ್ದ ಭಯೋತ್ಪಾದಕರು ದೊಡ್ಡ ದಾಳಿಯನ್ನು ಯೋಜಿಸುತ್ತಿದ್ದರು. ಭದ್ರತಾ ಪಡೆಗಳಿಗೆ ಗರಿಷ್ಠ ಸಾವುನೋವುಗಳನ್ನು ಉಂಟುಮಾಡುವುದು ಅವರ ಗುರಿಯಾಗಿತ್ತು. ಜೊತೆಗೆ ನಗರದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಿದ್ಧರಾಗಿದ್ದರು ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.
ಭಾನುವಾರ ಜಮ್ಮುವಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುವ ಮುನ್ನ ಈ ದಾಳಿ ನಡೆದಿದೆ. 2019 ರ ಆಗಸ್ಟ್‌ನಲ್ಲಿ ಹಿಂದಿನ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪ್ರಧಾನಿಯವರು ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಬೇಟಿ ನೀಡುತ್ತಿದ್ದಾರೆ. ಇಲ್ಲಿನ ಪಲ್ಲಿ ಗ್ರಾಮದಲ್ಲಿ ಸಾವಿರಾರು ಪಂಚಾಯತ್ ಸದಸ್ಯರು ಭಾಗವಹಿಸುವ ಪ್ರಮುಖ ರ್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಪ್ರಧಾನಿಗಳ ಭೇಟಿಗೆ ಮುಂಚಿತವಾಗಿ ಹೈ ಅಲರ್ಟ್‌ ಭದ್ರತೆ ಘೋಷಿಸಲಾಗಿದೆ. ಮತ್ತು ಜಮ್ಮು ಮತ್ತು ಕಾಶ್ಮೀರದಾದ್ಯಂತ ಯಾವುದೇ ಭಯೋತ್ಪಾದಕ ದಾಳಿಯನ್ನು ತಡೆಗಟ್ಟಲು ಭದ್ರತಾ ಪಡೆಗಳು 24 ಗಂಟೆ ಗಸ್ತು ನಡೆಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!