ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಲ ತೀರಿಸಲು ಯಾವ ಸ್ನೇಹಿತರೂ ಎರಡು ಸಾವಿರ ರೂ. ಕೊಡದ ಕಾರಣ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸಾಲಬಾಧೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುವವರನ್ನು ನೋಡಿದ್ದೇವೆ. ಆದರೆ ಕೇವಲ ಎರಡು ಸಾವಿರ ರೂ. ಸಾಲ ಮಾಡಿಕೊಂಡು ಅದನ್ನು ತೀರಿಸಲು ಸ್ನೇಹಿತರ ಸಹಾಯ ಮಾಡಲಿಲ್ಲ ಎನ್ನುವ ಕಾರಣಕ್ಕೆ ವ್ಯಕ್ತಿ ಆತ್ಮಹತ್ಯೆಯ ಹಾದಿ ಹಿಡಿದಿದ್ದು ಇದೇ ಮೊದಲು ಎನಿಸುತ್ತದೆ.
ತೆಲಂಗಾಣದ ಮೆಡ್ಚಲ್ ಜಿಲ್ಲೆಯ ಶರ್ಮಿಪೇಟೆಯ ಮರ್ಯಾಲ ಆನಂದ್ ಮೃತರು. ಈತ ಕಂಪನಿಯೊಂದರ ಉದ್ಯೋಗಿಯಾಗಿದ್ದ. ಮೂರು ತಿಂಗಳ ಹಿಂದೆ ಫೈನಾನ್ಸ್ನಲ್ಲಿ ಹತ್ತು ಸಾವಿರ ಸಾಲ ಮಾಡಿದ್ದ. ಅದನ್ನು ಮರುಪಾವತಿ ಮಾಡುವಂತೆ ಫೈನಾನ್ಸ್ ಮಂದಿ ತಿಳಿಸಿದ್ದರು.
ಸ್ವಲ್ಪಸಮಯ ನೀಡಿ ಎಂದು ಹೇಳಿದರೂ ಫೈನಾನ್ಸ್ನವರು ಸಮಯ ನೀಡಲು ಆಗುವುದಿಲ್ಲ ಎಂದಿದ್ದಾರೆ.
10 ಸಾವಿರ ಸಾಲ ತೀರಿಸಲು ಇನ್ನೆರಡು ಸಾವಿರ ಬೇಕಿದ್ದು, ಆತ ಸ್ನೇಹಿತರು, ಸಂಬಂಧಿಕರ ಮನೆಗೆ ತೆರಳಿ ಹಣ ಕೇಳಿದ್ದಾನೆ. ಆದರೆ ಯಾರೂ ಆತನಿಗೆ ಸಹಾಯ ಮಾಡಿಲ್ಲ. ಕೇವಲ ಎರಡು ಸಾವಿರ ರೂ. ನೀಡಲು ಯಾರೂ ನನ್ನನ್ನು ನಂಬುತ್ತಿಲ್ಲ ಎಂದು ಬೇಸರದಿಂದ ಆತ್ಮಹತ್ಯೆಗೆ ಶರಣಾಗಿದ್ದಾನೆ.