ರಾಜ್ಯದ ಪ್ರತಿಯೊಬ್ಬ ಕುರಿಗಾಹಿಗೆ 20 ಕುರಿ, ಒಂದು ಮೇಕೆ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಹಾವೇರಿ:

ರಾಜ್ಯದ ಪ್ರತಿ ಜಿಲ್ಲೆಯ ಪ್ರತಿಯೊಬ್ಬ ಕುರಿಗಾಹಿಗಳಿಗೆ ೨೦ ಕುರಿ ಹಾಗೂ ಒಂದು ಮೇಕೆಯನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ಬ್ಯಾಡಗಿಯಲ್ಲಿ ಮಂಗಳವಾರ ಜರುಗಿದ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಕುರಿಗಾರರ ಅಭಿವೃದ್ಧಿಗೆ ರಾಜ್ಯ ಬಿಜೆಪಿ ಸರ್ಕಾರ ದೃಢ ಸಂಕಲ್ಪ ಮಾಡಿದ್ದು ಈ ಹಿನ್ನಲೆಯಲ್ಲಿ ೨೦ ಕುರಿ ಮತ್ತು ಮೇಕೆ ನೀಡುವುದಕ್ಕಾಗಿ ೩೫೪ ಕೋಟಿ ರೂಗಳನ್ನು ಮೀಸಲಿಡಲಾಗಿದೆ ಎಂದರು.
ಕುರಿಗಾಹಿಗಳಿಗೆ ಕುರಿ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುವುದು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಈ ಯೋಜನೆಯನ್ನು ಬರುವ ತಿಂಗಳಿಂದಲೇ ಜಾರಿಗೊಳಿಸಲಾಗುವುದು. ಇಂತಹ ಯೋಜನೆಯನ್ನು ನೀವೆಕೆ ಜಾರಿಗೆ ತರಲಿಲ್ಲ ಎಂದು ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತರಾಟಗೆ ತಗೆದುಕೊಂಡರು.
ಹಿಂದುಳಿದ ಹೆಸರಲ್ಲಿ ಸಮಾಜಿಕ ನ್ಯಾಯದ ಭಾಷಣ ಮಾಡಿಕೊಂಡು ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಅವರ ತೆಲೆಗೆ ಏಕೆ ಹೊಳೆಯಲಿಲ್ಲ. ಕುರಿಗಾರರು ಮಳೆ, ಬಿಸಿಲಲ್ಲಿ ಸಿಲುಕಿಕೊಂಡ ಅವರ ಬದುಕು ಬಹಳ ಸಂಕಷ್ಟದಲ್ಲಿದೆ. ಇವರಿಗೆ ಸಹಾಯ ಮಾಡುವ ಕನಿಷ್ಟ ವಿಚಾರವೂ ಅವರ ತೆಲೆಗೆ ಬರಲಿಲ್ಲ. ಆದರೆ, ನಾನು ಅವರಿಗೆ ಸಹಾಯ ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜ್ಯದ ೫೦ ಸಾವಿರ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಉಪ ನೋಂದಣಿ ಕಚೇರಿಯಲ್ಲಿ ನೋಂದ ಮಾಡಿಸಿ ಲಕ್ಷಾಂತರ ಲಂಬಾಣಿ ಸಮುದಾಯದವರ ಮನೆಗಳಿಗೆ ಹಕ್ಕು ಪತ್ರಗಳನ್ನು ನೀಡುವುದಕ್ಕೆ ಬಿಜೆಪಿ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಜನ ಸಂಕಲ್ಪ ಯಾತ್ರೆಗೆ ದೊರೆಯುತ್ತಿರುವ ಅಭೂತಪೂರ್ವ ಬೆಂಬಲವನ್ನು ಗಮನಿಸಿದರೆ ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ. ಬರುವ ೨೦೨೩ರ ಚುನಾವಣೆಯಲ್ಲಿ ಭಾರತಿಯ ಜನತಾ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಜಾರಿಗೆ ತಂದ ಯೋಜನೆಗಳೆಲ್ಲ ದೌರ್ಭಾಗ್ಯ ಯೋಜನೆಗಳಾದವು. ಐದು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ರಾಜ್ಯವನ್ನು ಅಧೋಗತಿಗೆ ತಂದಿತು. ಭಾರತ್ ಜೋಡೋ ಯಾತ್ರೆ ಒಂದು ರೀತಿಯ ನಾಟಕ ಕಂಪನಿಯಾಗಿದೆ ಎಂದು ಕಾಂಗ್ರೆಸ್ಸಿನ ಭಾರತ್ ಜೋಡೋ ಯಾತ್ರೆಯನ್ನು ನಾಟಕ ಕಂಪನಿಗೆ ಹೋಲಿಸುವ ಮೂಲಕ ಲೇವಡಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿದರು. ವೇದಿಕೆಯಲ್ಲಿ ಸಚಿವರಾದ ಅರಬೈಲ್ ಶಿವರಾಮ ಹೆಬ್ಬಾರ, ಬಿ.ಸಿ.ಪಾಟೀಲ, ಗೋವಿಂದ ಕಾರಜೋಳ, ಸಂಸದ ಶಿವಕುಮಾರ ಉದಾಸಿ, ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ವಿ.ಪ ಸದಸ್ಯ ಎನ್.ರವಿಕುಮಾರ ಹಾಗೂ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!