ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸ ದಿಗಂತ ವರದಿ, ಚಿತ್ರದುರ್ಗ:
ಕೋವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆ ತೀವ್ರವಾಗಿ ಹರಡುತ್ತಿದ್ದು, ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ 175 ಆಕ್ಸಿಜನ್ ಬೆಡ್ಗಳನ್ನು ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ 200 ಬೆಡ್ಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆರ್ಯೋಗಾಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಉಂಟಾಗಬಾರದು. ಪೂರೈಕೆ ನಿರಂತರವಾಗಿರಬೇಕು. ಯಾವುದೇ ಕೋವಿಡ್ ರೋಗಿಗಳು ಉಸಿರಾಟದ ಸಮಸ್ಯೆ ಎದುರಿಸುವ ಮುಂಚಿತವಾಗಿ ಅಗತ್ಯ ಔಷದೋಪಚಾರ ಮಾಡಿಕೊಳ್ಳಬೇಕು ಎಂದರು.
ಚಿತ್ರದುರ್ಗಕ್ಕೆ ಬಳ್ಳಾರಿ, ಹೊಸಪೇಟೆ ಹಾಗೂ ದಾವಣಗೆರೆಯಿಂದ ಆಕ್ಸಿಜನ್ ಪೂರೈಕೆಯಾಗುತ್ತಿದ್ದು, ಅಲ್ಲಿನ ಜಿಲ್ಲಾಧಿಕಾರಿಗಳು ಇತರೆ ಜಿಲ್ಲೆಗಳಿಗೆ ಪೂರೈಕೆ ಮಾಡದಂತೆ ನಿಬಂಧ ವಿಧಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸರ್ಕಾರದ ಗಮನಕ್ಕೆ ತಂದು ಆಕ್ಸಿಜನ್ ಪೂರೈಕೆಗೆ ಕ್ರಮವಹಿಸಲಾಗುವುದು. ಆದರೆ ನಮ್ಮ ಜಿಲ್ಲೆಗೆ ಎಷ್ಟು ಪ್ರಮಾಣದ ಆಕ್ಸಿಜನ್ ಬೇಕಾಗಿದೆ ಎಂಬ ದಿನನಿತ್ಯದ ಬೇಡಿಕೆ ನೀಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟು 16 ಕಡೆ ಡೆಡಿಕೇಟೆಡ್ ಕೋವಿಡ್ ಹೆಲ್ತ್ ಸೆಂಟರ್ ಆರಂಭಿಸಲಾಗಿದೆ. ಪ್ರತಿ ಕೇಂದ್ರದಲ್ಲಿಲ್ಲೂ 30 ಆಕ್ಸಿಜನೇಟೆಡ್ ಬೆಡ್ಗಳನ್ನು ಆರಂಭಿಸಲಾಗುತ್ತಿದೆ ಎಂದು ಡಿಎಚ್ಒ ಡಾ.ಫಾಲಾಕ್ಷ ತಿಳಿಸಿದರು.
ಈ ವೇಳೆ ಸರ್ಕಾರ ಮಟ್ಟದ ವೈದ್ಯಕೀಯ ಸಲಹಾ ಸಮಿತಿ ನೀಡಿರುವ ಪ್ರೋಟೊಕಾಲ್ ಅನ್ವಯ ಪ್ರತಿ ಕೋವಿಡ್ ರೋಗಿಗೆ ಚಿಕಿತ್ಸೆ ನೀಡಲು ಕ್ರಮವಹಿಸಲು ಎಲ್ಲ ವೈದ್ಯಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಸ್ಟೀರಾಯ್ಡ್ ಔಷಧಿ, ರೆಮ್ಡಿಸಿವಿರ್ ಕೊರತೆಯಾಗದಂತೆ ಪ್ರತಿನಿತ್ಯವೂ ಇಂಡೆಟ್ ಕಳುಹಿಸಿ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹೊಸದುರ್ಗ ತಾಲ್ಲೂಕಿನಲ್ಲಿ ಕೋವಿಡ್ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಅಂಕಿಅಂಶ ತೋರಿಸಲಾಗಿದೆ. ಆದರೆ ವಾಸ್ತವದಲ್ಲಿ ಅಲ್ಲಿ ರೋಗಿಗಳಿಲ್ಲ. ಅವರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇವೆಂದು ಹೊರಗಡೆ ತಿರುಗಾಡುತ್ತಿರುವ ಬಗ್ಗೆ ಮಾಹಿತಿ ಇದೆ. ಈ ಕುರಿತು ಪೊಲೀಸ್ ಇಲಾಖೆಗೆ ತಿಳಿಸಿ ಸೂಕ್ತ ಕ್ರಮವಹಿಸಕೆಂದರು.
ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮಾತನಾಡಿ, ಜಿಲ್ಲಾಸ್ಪತ್ರೆಯಲ್ಲಿ ಈಗಿರುವ ಐಸಿಯು ಬೆಡ್ಗಳೊಂದಿಗೆ ಹೆಚ್ಚುವರಿ ಐಸಿಯು ಬೆಡ್ ನಿರ್ಮಾಣ ಮಾಡಿ ಇದಕ್ಕೆ ಬೇಕಾದ ಸಿಬ್ಬಂದಿಗಳನ್ನು ಆನ್ಕಾಲ್ ಆಧಾರದಲ್ಲಿ ಖಾಸಗಿ ವೈದ್ಯರ ಸೇವೆ ಬಳಕೆ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ. ಆಕ್ಸಿಜನ್ ಔಷಧಿಗಳ ಪೂರೈಕೆಗಾಗಿ ಅಪರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಪ್ರತಿನಿತ್ಯವೂ ವಾಸ್ತವದ ವರದಿ ನೀಡಲು ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ, ಅಪರ ಜಿಲ್ಲಾಧಿಕಾರಿ ಈ.ಬಾಲಕೃಷ್ಣ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಹೆಚ್.ಜೆ.ಬಸವರಾಜ್, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧೀಕ್ಷಕ ಡಾ.ಫಾಲಾಕ್ಷ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.