2,000 ರೂ. ನೋಟುಗಳ ವಿನಿಮಯ: ತುರ್ತು ವಿಚಾರಣೆಗೆ ನೋ ಎಂದ ಸುಪ್ರೀಂ ಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗುರುತಿನ ಪುರಾವೆಗಳಿಲ್ಲದೇ 2,000 ರೂ. ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಅವಕಾಶ ನೀಡುವ ಆರ್‌ಬಿಐ (Reserve Bank of India) ಮಾರ್ಗಸೂಚಿಗಳ ವಿರುದ್ಧ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Supreme Court) ನಿರಾಕರಿಸಿದೆ.

ಗುರುವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಸುಧಾಂಶು ಧುಲಿಯಾ ನೇತೃತ್ವದ ದ್ವಿ ಸದಸ್ಯ ಪೀಠ ಬೇಸಿಗೆ ರಜೆಯ ಬಳಿಕ ಈ ಅರ್ಜಿಯನ್ನು ಸಿಜೆಐ ಪೀಠದ ಮುಂದೆ ಪ್ರಸ್ತಾಪಿಸಬಹುದು ಎಂದು ಹೇಳಿದೆ.

ಆರ್‌ಬಿಐ ನಿರ್ಧಾರವನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್ (Delhi High Court) ತೀರ್ಪಿನ ವಿರುದ್ಧ ಅಶ್ವಿನಿ ಉಪಾಧ್ಯಾಯ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು.

ಆರ್‌ಬಿಐ ಮಾರ್ಗಸೂಚಿಗಳು ಸ್ಪಷ್ಟವಾಗಿ ಅನಿಯಂತ್ರಿತವಾಗಿದೆ. ಅಲ್ಲದೇ ಅಪರಾಧಿಗಳು ಕಪ್ಪು ಹಣವನ್ನು ವಿನಿಮಯ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. 3 ದಿನಗಳಲ್ಲಿ 50,000 ಕೋಟಿ ರೂ. ವಿನಿಮಯವಾಗಿದೆ. ಇದು ವಿಶ್ವದಲ್ಲೇ ಮೊದಲ ಬಾರಿಗೆ ನಡೆಯುತ್ತಿದೆ. ಕಪ್ಪು ಹಣ, ಖೋಟಾನೋಟು ಮತ್ತು ಮನಿ ಲಾಂಡರಿಂಗ್ ಎದುರಿಸಲು ಉದ್ದೇಶಿಸಿರುವ ಬಹು ಶಾಸನದ ಉದ್ದೇಶಗಳಿಗೆ ಹೈಕೋರ್ಟ್ ತೀರ್ಪು ವಿರುದ್ಧವಾಗಿದೆ. ಆರ್‌ಬಿಐ ಅಧಿಸೂಚನೆಯು ಭಾರತದಲ್ಲಿ ಕಾನೂನಿನ ನಿಯಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ವಾದಿಸಿದರು.

ಪೀಠ, ರಜೆಯ ಸಮಯದಲ್ಲಿ ವಿಚಾರಣೆ ನಡೆಸಲು ಈ ಅರ್ಜಿ ಅರ್ಹವಾಗಿಲ್ಲ. ಬೇಸಿಗೆ ವಿರಾಮದ ನಂತರ ಮುಖ್ಯ ನ್ಯಾಯಾಧೀಶರ ಮುಂದೆ ವಿಷಯವನ್ನು ಪ್ರಸ್ತಾಪಿಸಬಹುದು ಎಂದು ಹೇಳಿತು.

ದೆಹಲಿ ಹೈಕೋರ್ಟ್ ಮೇ 29 ರಂದು ತನ್ನ ತೀರ್ಪಿನಲ್ಲಿ 2,000 ರೂ. ನೋಟುಗಳು ತಮ್ಮ ಉದ್ದೇಶವನ್ನು ಪೂರೈಸಿವೆ ಮತ್ತು ಅದನ್ನು ಹಿಂತೆಗೆದುಕೊಳ್ಳುವ ನಿರ್ಧಾರವು ನೀತಿ ವಿಷಯವಾಗಿದ್ದು, ನ್ಯಾಯಾಲಯಗಳು ಮಧ್ಯಪ್ರವೇಶಿಸಬಾರದು ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!