ಹೊಸ ದಿಗಂತ ವರದಿ, ಕಲಬುರಗಿ:
ಜನರ ಭಾವನೆ, ಅವರ ವಿಚಾರಕ್ಕೆ ಒತ್ತು ನೀಡಿ ಈ ಬರುವ 2021ನೇ ವರ್ಷ ಹೋರಾಟ ಹಾಗೂ ಸಂಘಟನೆಗೆ, ಮೀಸಲಾಗಿ ಇಟ್ಟು ಪಕ್ಷವನ್ನು ಬೇರುಮಟ್ಟದಿಂದ ಶಕ್ತಿಶಾಲಿಯಾಗಿ ಮಾಡುವುದೇ ನಮ್ಮ ಮುಂದಿರುವ ಗುರಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಪ್ರತಿ ಜಿಲ್ಲೆ, ಪ್ರತಿ ಊರಿನ ಸಮಸ್ಯೆಗಳನ್ನು ಅರಿತುಕೊಂಡು ಹೋರಾಟ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಉದ್ಯೋಗವಕಾಶ ನೀಡಲಾಗಿತ್ತು, ಆದರೆ 371(ಜೆ) ಅಡಿಯಲ್ಲಿ ಒಂದು ನೇಮಕಾತಿಗಳು ನಡೆದಿಲ್ಲ ಎಂದರು. ಈ ಭಾಗಕ್ಕೆ ಬಿಡುಗಡೆಯಾಗಬೇಕಿದ್ದ 1500 ಕೋಟಿ ರೂಪಾಯಿ ಪೈಕಿ, 250 ಕೋಟಿ ಮಾತ್ರ ಬಿಡುಗಡೆಯಾಗಿದೆ ಎಂದರು. ಈ ಭಾಗದ ಅಭಿವೃದ್ಧಿಗೆ ಬಿಜೆಪಿ ಪಕ್ಷ ಕಡೆಗಣನೆ ಜೊತೆಗೆ ನೆರೆ ಪರಿಹಾರ ವಿಷಯದಲ್ಲಿಯೂ ಸಹ ಅನ್ಯಾಯ ಮಾಡಿದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಶೆ.55ರಷ್ಟು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. ಅಧ್ಯಕ್ಷ-ಉಪಾದ್ಯಕ್ಷ ಚುನಾವಣೆ ಈಗ ಪಾರದರ್ಶಕವಾಗಿ ನಡೆಯಬೇಕಾಗಿದೆ. ಬಿಜೆಪಿ ಸರ್ಕಾರದ ಕಾರ್ಯವೈಖರಿಯನ್ನು ಅಮಿತ್ ಶಾ ಹಾಡಿ ಹೊಗಳಲಿ, ರಾಜ್ಯಕ್ಕೆ ಹೆಚ್ಚು ಹೆಚ್ಚು ಅನುದಾನ ನೀಡಲಿ. ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಚಾಲನೆ ನೀಡಲಿ ಎಂದರು.
ಸಾಫ್ಟ್ ಕಾರ್ನರ ಪ್ರಶ್ನೆಯೇ ಇಲ್ಲ
ಮಹಾರಾಷ್ಟ್ರ ವಿಷಯದಲ್ಲಿ ಕಾಂಗ್ರೆಸ್ ಪಕ್ಷದ ಸಾಫ್ಟ್ ಕಾರ್ನರ್ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಗಡಿ ವಿಷಯದಲ್ಲಿ ಕಾಂಗ್ರೆಸ್ ಪಕ್ಷ ಸುಮ್ಮನೆ ಕೂಡಲಾರದು. ಸಿಎಂ ಸಿಡಿ ವಿಚಾರ ಯತ್ನಾಳ ಮತ್ತೀತರರ ಏನೇನೂ ಹೇಳಿದ್ದಾರೆಯೋ ಹೇಳಲಿ, ಆದರೆ ಸದ್ಯಕ್ಕೆ ನಾನೇನೂ ಹೇಳುವುದಿಲ್ಲ. ಜನೇವರಿ 20ಕ್ಕೆ ರಾಜ ಭವನ ಚಲೋ ಇದೆ. ನೋಡಿ ಹೇಗೆ ಹೋರಾಟ ಮಾಡುತ್ತೇವೆ ಎಂದರು. ಸಿದ್ದರಾಮಯ್ಯ-ಡಿಕೆಸಿ ನಡುವೆ ಭಿನ್ನಾಭಿಪ್ರಾಯ ವಿಚಾರದ ಬಗ್ಗೆ ಮಾತನಾಡಿದ ಅವರು, ನಮ್ಮದು ಕಾಂಗ್ರೆಸ್ ಪಕ್ಷ. ಒಂದೇ ಕೈ, ಒಂದೇ ಧ್ವಜ. ಬಿಜೆಪಿಯಲ್ಲಿ ನಡೆಯುತ್ತಿರುವ ಜಗಳದಂತೆ ನಮ್ಮಲ್ಲಿ ನಡೆಯುತ್ತಿಲ್ಲ ಎಂದರು. ನಮ್ಮ ಲ್ಲಿ ಒಗ್ಗಟ್ಟು ಇರುವುದರಿಂದಲೇ ರಾಜ್ಯದ್ಯಂತ ಸಂಘಟನಗೆ ಓಡಾಡುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಈಶ್ವರ ಖಂಡ್ರೆ, ಶಾಸಕ ಪ್ರಿಯಾಂಕ್ ಖರ್ಗೆ, ಅಜಯಸಿಂಗ್, ಮಾಜಿ ಸಚಿವ ಶರಣಪ್ರಕಾಶ ಪಾಟೀಲ ಹಾಗೂ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಉಪಸ್ಥಿತರಿದ್ದರು.