ಹೊಸ ದಿಗಂತ ವರದಿ, ಉಡುಪಿ:
ನಾಡಿನ ಆಕಾಶ ವೀಕ್ಷಕರು ಹಾಗೂ ಆಕಾಶಕಾಯಗಳ ಆಸಕ್ತರಿಗೆ 2019 ಮತ್ತು2020 ಸಾಕಷ್ಟು ಆಸಕ್ತಿಕರ ವಿದ್ಯಮಾನಗಳು ಘಟಿಸಿದ ವರ್ಷಗಳಾಗಿದ್ದರೆ, 2021ರಲ್ಲಿ ಭಾರತೀಯರಿಗೆ ಒಂದೇ ಒಂದು ಗ್ರಹಣದ ದರ್ಶನ ಭಾಗ್ಯ ಲಭಿಸುವುದಿಲ್ಲ ಎಂದು ಖಗೋಳ ತಜ್ಞ ಡಾ.ಎ.ಪಿ. ಭಟ್ ತಿಳಿಸಿದ್ದಾರೆ.
2021ರಲ್ಲಿ ನಾಲ್ಕು ಗ್ರಹಣಗಳು ಸಂಭವಿಸುತ್ತವೆ. ಮೊದಲ ಖಗ್ರಾಸ ಚಂದ್ರಗ್ರಹಣ ಮೇ 26ಕ್ಕೆ, ನಂತರ ಜೂನ್ 10ಕ್ಕೆ ಕಂಕಣ ಸೂರ್ಯ ಗ್ರಹಣ, ನವೆಂಬರ್ 19ಕ್ಕೆ ಪಾರ್ಶ್ವ ಚಂದ್ರಗ್ರಹಣ ಹಾಗೂ ಡಿಸೆಂಬರ್ 4ಕ್ಕೆ ಖಗ್ರಾಸ ಸೂರ್ಯ ಗ್ರಹಣಗಳು ಸಂಭವಿಸುತ್ತವೆಯಾದರೂ ಭಾರತಕ್ಕೆ ಇವು ಗೋಚರಿಸುವುದಿಲ್ಲ.
ನಾಲ್ಕು ಸೂಪರ್ ಮೂನ್ ದರ್ಶನ ವಿಶೇಷವೆಂದರೆ ಒಂದು ವರ್ಷದಲ್ಲಿ ನಾಲ್ಕು ಸೂಪರ್ ಮೂನ್ಗಳು ಗೋಚರಿಸುತ್ತವೆ. ಈ ಸಂದರ್ಭದಲ್ಲಿ ಚಂದ್ರ ಸಾಮಾನ್ಯಕ್ಕಿಂತ ದೊಡ್ಡದಾಗಿ ಗೋಚರಿಸುತ್ತಾನೆ. ಮಾರ್ಚ್ 28, ಏಪ್ರಿಲ್ 27, ಮೇ 26 ಹಾಗೂ ಜೂನ್ 24ರ ಪೌರ್ಣಮಿಗಳಂದು ಚಂದ್ರ ಎಂದಿಗಿಂತ ಸುಮಾರು ಶೇ. 25ರಷ್ಟು ದೊಡ್ಡದಾಗಿ ಕಾಣುವ ಸೂಪರ್ ಮೂನ್ಗಳಾಗಿರುತ್ತವೆ.
ಕುಜನನ್ನೇ ಮರೆಮಾಚುವ ಚಂದ್ರ:
ಏಪ್ರಿಲ್ 27ರಂದು ಮಂಗಳನನ್ನೇ ಚಂದ್ರ ಅಡ್ಡವಾಗಿ ಮರೆಮಾಚುವ ಕೌತುಕವೊಂದು ಆಕಾಶದಲ್ಲಿ ಘಟಿಸಲಿದೆ. ಫೆಬ್ರವರಿ ಮೊದಲ ವಾರದವರೆಗೆ ಬೆಳಗಿನ ಜಾವದಲ್ಲಿ ಕಾಣಲು ಸಿಗುವ ಶುಕ್ರ ನಂತರ, ಏಪ್ರಿಲ್ 21ರಿಂದ ಇಡೀ ವರ್ಷ ಪಶ್ಚಿಮ ಆಕಾಶದಲ್ಲಿ ಸಂಜೆ ವೇಳೆ ಗೋಚರಿಸಲಿದೆ. ಸುಮಾರು 584ದಿನಗಳಿಗೊಮ್ಮೆ ಸಂಜೆಯ ಆಕಾಶದಲ್ಲಿ ಚೆಂದವಾಗಿ ದೊಡ್ಡದಾಗಿ ಕಾಣುವ ಶುಕ್ರ ಗ್ರಹ, ಅಕ್ಟೋಬರ್ 29ರಂದು 47 ಡಿಗ್ರಿ ಎತ್ತರದಲ್ಲಿ ಪಶ್ಚಿಮ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ.
ಬುಧನ ದರ್ಶನ ಕೇವಲ ಆರೇ ದಿನ!
ವರ್ಷದಲ್ಲಿ ಹೆಚ್ಚೆಂದರೆ ಆರು ದಿನ ಅಥವಾ ಒಂದು ವಾರ ಕಾಲ ಕಾಣುವ ಬುಧ ಗ್ರಹ, ಈ ವರ್ಷ ಜನವರಿ 24, ಮೇ17, ಸೆಪ್ಟೆಂಬರ್ 14ರಂದು ಸಂಜೆಯ ಸೂರ್ಯಾಸ್ತವಾದ ಕೆಲ ನಿಮಿಷಗಳ ಕಾಲ ಪಶ್ಚಿಮ ಆಕಾಶದಲ್ಲಿ ಕಾಣಿಸುತ್ತದೆ. ಮಾರ್ಚ್ 6, ಜುಲೈ 4 ಹಾಗೂ ಅಕ್ಟೋಬರ್ 25ರಂದು ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣಲು ಸಿಗುತ್ತದೆ. ಪ್ರತೀ ವರ್ಷಕ್ಕೊಮ್ಮೆ ದೊಡ್ಡದಾಗಿ ಕಾಣುವ ಗುರು ಹಾಗೂ ಶನಿಗ್ರಹಗಳು ಈ ಬಾರಿಯೂ ಆಕರ್ಷಕವಾಗಿ ಕಾಣಲು ಸಿಗುತ್ತವೆ. ಆಗಸ್ಟ್ 2ರಂದು ಶನಿಗ್ರಹ ಹಾಗೂ 20ರಂದು ಗುರುಗ್ರಹ ರಾತ್ರಿ ಇಡೀ ಕಾಣಲು ಸಿಗಲಿವೆ. ಆಗಸ್ಟ್ ತಿಂಗಳಲ್ಲಿ ಈ ಎರಡೂ ಗ್ರಹಗಳು ಅದ್ಭುತವಾಗಿ ಕಾಣಲಿವೆ.
ಹಲವು ಉಲ್ಕಾಪಾತಗಳು:
ಇನ್ನು ಪ್ರತೀ ವರ್ಷ ಸಂಭವಿಸುವ ಮಾಮೂಲಿ 15 ಉಲ್ಕಾಪಾತಗಳಲ್ಲಿ ಈ ವರ್ಷ ಕೆಲವೇ ಉಲ್ಕಾಪಾತಗಳು ಪ್ರಮುಖವಾದವು. ಜನವರಿ 4ರ ಕ್ವಾಡ್ರಂಟಿಡ್ ಉಲ್ಕಾಪಾತ ತಾಸಿಗೆ ಅಂದಾಜು ಸುಮಾರು 120, ಆಗಸ್ಟ್ 12ರ ಪರ್ಸಿಡ್ ಉಲ್ಕಾಪಾತ ತಾಸಿಗೆ 150 ಹಾಗೂ ಡಿಸೆಂಬರ್ 14ರ ಜಿಮಿನಿಡ್ ಉಲ್ಕಾಪಾತಗಳು ಪ್ರಮುಖವಾದವುಗಳು. ಚಂದ್ರನಿಲ್ಲದ ಆಕಾಶ ಉಲ್ಕಾಪಾತದ ಸೌಂದರ್ಯ ವೀಕ್ಷಣೆಗೆ ಹೆಚ್ಚು ಪ್ರಶಸ್ತ್ಯ. ಸೂರ್ಯನ ಸುತ್ತ ದೀರ್ಘ ವೃತ್ತಾಕಾರದಲ್ಲಿ ಸುತ್ತುವ ಭೂಮಿ ಜನವರಿ 2ರಂದು ಸಮೀಪದಲ್ಲಿದ್ದರೆ ( ಪೆರಿಜಿ) ಜುಲೈ 6 ರಂದು ದೂರದಲ್ಲಿ (ಅಪೊಜಿ) ಯಲ್ಲಿರುತ್ತದೆ ಎಂದು ಡಾ.ಎ.ಪಿ.ಭಟ್ ತಿಳಿಸಿದ್ದಾರೆ.